
ಕೋಲಾರ,ಆ,೧೮- ಪ್ರತಿ ಮಗುವಿನ ಸಾಧನೆಯ ಹಿಂದೆ ಪೋಷಕರ ಧ್ಯಾನ, ತ್ಯಾಗ ಅಡಗಿರುತ್ತದೆ ಕಲಿಕೆಗೆ ಬಡತನವು ಅಡ್ಡಿಯಾಗದು, ಮಕ್ಕಳ ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿ ಪ್ರೋತ್ಸಾಹಿಸಿದರೆ ಮಗುವಿನಲ್ಲಿರುವ ಅರಿವು ಜಾಗೃತಗೊಂಡು ಉತ್ತಮ ಸಾಧನೆ ಮಾಡಲು ಸಹಾಯಕವಾಗುತ್ತದೆ ಎಂದು ಕೆಜಿಎಫ್ ಸಿಇಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ತಿಳಿಸಿದರು.
ನಗರದ ಕುವೆಂಪು ನಗರದಲ್ಲಿರುವ ಶ್ರೀ ಕನಕದಾಸ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ರಾಜ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘ ವತಿಯಿಂದ ೭೭ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ೨೨೬ನೇ ಜಯಂತಿ ಪ್ರಯುಕ್ತ ನಿವೃತ್ತಿ ಹೊಂದಿದ ಸರ್ಕಾರಿ ನೌಕರರು, ಸಾಧಕರು, ಯೋಧರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಸಿ ಮಾತನಾಡಿದ ಅವರು, ಪೋಷಕರು ಮಕ್ಕಳ ಕಲಿಕಾ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಅಗತ್ಯ ಸಂದರ್ಭಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕೆ.ಎ.ಎಸ್ ಅಧಿಕಾರಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಂ.ವಿವೇಕ್ ಮಹದೇವ್ ಮಾತನಾಡಿಸಂಗೊಳ್ಳಿ ರಾಯಣ್ಣ ಹಾಗೂ ಕುಗ್ರಾಮದ ವ್ಯಕ್ತಿ ೧೪ ಬಾರಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಈ ೩ ವ್ಯಕ್ತಿಗಳ ಆದರ್ಶ, ಛಲ, ಆತ್ಮವಿಶ್ವಾಸವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕ ನುಡಿಗಳ್ನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಮುನಿರಾಜು, ರಾಜ್ಯದಲ್ಲಿಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘವನ್ನು ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಮಾತನಾಡಿಗುಲಾಮಗಿರಿಯಿಂದ ನಮ್ಮ ಬಿಡುಗಡೆಗೊಳಿಸುವುದು ಬಿಟ್ಟು ಬೇರೆ ಯಾವುದೇ ಆಲೋಚನೆ, ರಾಯಣ್ಣರಲ್ಲಿ ಇರಲಿಲ್ಲ ಎಂದು ಹೇಳಿದರು.
ಬೆಂಗಳೂರು ಉತ್ತರ ವಿವಿ ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಮೊದಲನೇ ರಾಂಕ್ ಚಿನ್ನದ ಪದಕ ಪಡೆದ ರಘು, ಎಂಎಸ್ಸಿ ಗಣಿತ ವಿಭಾಗದಲ್ಲಿ ಮೂರನೇ ರಾಂಕ್ ಪಡೆದ ಲೇಖನ ಕೈಲಾಶ್, ಎನ್‌ಐಟಿ ಹಿಂದುಳಿದ ವರ್ಗದ ವಿಭಾಗದಲ್ಲಿ ದೇಶಕ್ಕೆ ಮೊದಲನೆ ರಾಂಕ್ ಪಡೆದ ಆಶಿತ್ ನರೇನ್ ಅರಸ್ ಹಾಗೂ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುತ್ತಿರುವ ಐಐಟಿ ವಿದ್ಯಾರ್ಥಿ ಪ್ರಿಯಾಂಕ ಯಲ್ಲೇಶ್ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಯೋಧರು ಮತ್ತು ಸಾಧಕರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕಿ ಕೆ.ಎನ್.ಸರಸ್ವತಮ್ಮ, ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷ ಕೆ.ಎನ್.ಪ್ರಕಾಶ್, ಶ್ರೀನಿವಾಸಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಭಾಗ್ಯಲಕ್ಷ್ಮಿ ಕಾಡುಗುರು ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ವಿ.ನಾಗಭೂಷಣ್, ಕುರುಬ ಸಂಘದ ಜಿಲ್ಲಾ ಕಾರ್ಯದರ್ಶಿ ನಡುಪಳ್ಳಿ ಕೃಷಮೂರ್ತಿ ಇತರರು ಇದ್ದರು.