ಪೋಲೆಂಡ್ ಮೇಲೆ ರಷ್ಯಾ ದಾಳಿ ಸಂಶಯಕ್ಕೆಡೆ

ಕೀವ್, ನ.೧೫- ಉಕ್ರೇನ್ ಮೇಲೆ ರಷ್ಯಾ ಭಾರೀ ಪ್ರಮಾಣದಲ್ಲಿ ಕ್ಷಿಪಣಿಗಳ ಮಳೆ ಸುರಿಸಿದ್ದು, ಈ ನಡುವೆ ಅಚಾತುರ್ಯದಿಂದ ನೆರೆಯ ರಾಷ್ಟ್ರ ಪೋಲೆಂಡ್‌ನ ಪ್ರೆಝೊವ್ಡೊ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ. ಆದರೆ ಈ ಬಗ್ಗೆ ಹಲವು ಅನುಮಾನಗಳು ಎದ್ದಿದ್ದು, ಮೂಲಗಳ ಪ್ರಕಾರ ಇದು ರಷ್ಯಾದ ಕ್ಷಿಪಣಿ ಅಲ್ಲವೆಂಬ ಮಾತು ಕೂಡ ಕೇಳಿ ಬರುತ್ತಿದೆ. ಅಲ್ಲದೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಕೂಡ ಕ್ಷಿಪಣಿ ರಷ್ಯಾ ಮೂಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಉಕ್ರೇನ್ ಮೇಲೆ ರಷ್ಯಾ ಬರೊಬ್ಬರಿ ರಷ್ಯಾ ೮೫ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಪ್ರಕಟಿಸಿದೆ. ಈ ದಾಳಿಯಿಂದಾಗಿ ನೆರೆಯ ಮೋಲ್ಡೋವಾದಲ್ಲಿ ಕೂಡಾ ವಿದ್ಯುತ್ ಸರಬರಾಜು ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ಘಟಕಗಳನ್ನು ಗುರಿ ಮಾಡಿದ ರಷ್ಯಾದ ಕ್ಷಿಪಣಿ ದಾಳಿಯಿಂದಾಗಿ ಸುಮಾರು ೭೦ ಲಕ್ಷ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಷ್ಯಾದ ೮೪ಕ್ಕೂ ಹೆಚ್ಚು ಕ್ಷಿಪಣಿಗಳ ಪೈಕಿ ಎರಡು ನೆರೆಯ ಪೋಲೆಂಡ್ ಮೇಲೆ ಕೂಡ ಬಿದ್ದಿದ್ದು, ಪರಿಣಾಮ ೨ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ರಷ್ಯಾದ ಕ್ಷಿಪಣಿ ಗಡಿಯನ್ನು ದಾಟಿ ಪೋಲೆಂಡ್‌ನ ಮೇಲೆ ಅಪ್ಪಳಿಸಿದ್ದು, ಘಟನೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ನ್ಯಾಟೊ ಹೇಳಿಕೆಯನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಪ್ರೆವೋಡೋವ್ ಎಂಬ ಗ್ರಾಮಕ್ಕೆ ಕ್ಷಿಪಣಿ ಅಪ್ಪಳಿಸಿದೆ ಎಂದು ಪೋಲೆಂಡ್ ಮಾಧ್ಯಮಗಳು ವರದಿ ಮಾಡಿವೆ. ಈ ಸಂಘರ್ಷದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ರ ನಾಯಕರು ತುರ್ತುಸಭೆ ನಡೆಸಿದ್ದಾರೆ ಎಂದು ಪೋಲಂಡ್ ಸರ್ಕಾರಿ ವಕ್ತಾರ ಪಿಯೋಟ್ರ್ ಮುಲ್ಲೆರ್ ಹೇಳಿದ್ದಾರೆ. ಆದರೆ ದೇಶದ ಮೇಲೆ ಕ್ಷಿಪಣಿ ದಾಳಿ ನಡೆದಿರುವುದನ್ನು ಅವರು ದೃಢಪಡಿಸಿಲ್ಲ. ಘಟನೆ ಬಳಿಕ ಹಂಗೇರಿ ಪ್ರಧಾನಿ ವಿಕ್ಟರ್ ಓರ್ಬನ್ ತುರ್ತಾಗಿ ರಕ್ಷಣಾ ಮಂಡಳಿಯ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಪೂರ್ವ ಪೋಲೆಂಡ್ ಗ್ರಾಮದಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಡ್ರುಝುಬಾ ಪೈಪ್‌ಲೈನ್‌ನಲ್ಲಿ ಕಚ್ಚಾತೈಲ ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಮಧ್ಯಮಗಳು ವರದಿ ಮಾಡಿದೆ. ಆದರೆ ಈ ಬಗ್ಗೆ ಹಲವರಲ್ಲಿ ಗೊಂದಲ ಮೂಡಿದೆ. ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಸದ್ಯ ಜಿ-೨೦ ಶೃಂಗಸಭೆಗಾಗಿ ಬಾಲಿಯಲ್ಲಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಹಲವು ಜಾಗತಿಕ ನಾಯಕರ ಜೊತೆ ದುಂಡುಮೇಜಿನ ಸಭೆ ನಡೆಸಿರುವ ವಿಚಾರವನ್ನು ಶ್ವೇತಭವನ ತಿಳಿಸಿದೆ.


ಪೋಲೆಂಡ್ ಗ್ರಾಮೀಣ ಪ್ರದೇಶದ ಮೇಲಿನ ಕ್ಷಿಪಣಿ ದಾಳಿಯ ಬಗ್ಗೆ ನಾವು ಸಂಪೂರ್ಣವಾಗಿ ತನಿಖೆ ಮಾಡುವವರೆಗೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ ಪಥದ ರೇಖೆಗಳನ್ನು ಗಮನಿಸಿದರೆ ಅದನ್ನು ರಷ್ಯಾದಿಂದ ಉಡಾಯಿಸಲಾಗಿದೆ ಎಂಬುದು ಅಸಂಭವವಾಗಿದೆ. ಆದರೂ ಈ ಬಗ್ಗೆ ನಾವು ಮತ್ತಷ್ಟು ತನಖೆ ನಡೆಸಲಿದ್ದೇವೆ. ಸ್ಫೋಟದ ಕುರಿತು ಪೋಲೆಂಡ್‌ನ ತನಿಖೆಯನ್ನು ಬೆಂಬಲಿಸಲು ನಾವು ಒಪ್ಪಿಕೊಂಡಿದ್ದು, ನಿಖರವಾಗಿ ಏನಾಯಿತು ಎಂಬುದನ್ನು ನಾವು ಲೆಕ್ಕಾಚಾರ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.
-ಜೋ ಬೈಡೆನ್, ಅಮೆರಿಕಾ ಅಧ್ಯಕ್ಷ
ನಾಯಕರ ನಡುವೆ ದುಂಡುಮೇಜಿನ ಸಭೆ
ಅತ್ತ ಪೋಲೆಂಡ್ ಮೇಲೆ ರಶ್ಯಾ ದಾಳಿ ನಡೆಸಿರುವ ಬಗೆಗಿನ ಸುದ್ದಿ ಸದ್ಯ ಜಾಗತಿಕ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪೋಲೆಂಡ್ ನ್ಯಾಟೋ ಸದಸ್ಯ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಸದ್ಯ ಜಿ-೨೦ ಶೃಂಗಸಭೆಯಲ್ಲಿ ಭಾಗಿಯಾಗಿರುವ ಕೆಲವು ನಾಯಕರು ಹಾಗೂ ಇತರೆ ನ್ಯಾಟೋ ಸದಸ್ಯ ರಾಷ್ಟ್ರಗಳು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜೊತೆ ಬಾಲಿಯಲ್ಲಿಯೇ ತುರ್ತು ದುಂಡುಮೇಜಿನ ಸಭೆ ನಡೆಸಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಫ್ರಾನ್ಸ್, ಕೆನಡಾ, ಜರ್ಮನಿ, ನೆದರ್ಲೆಂಡ್, ಸ್ಪೇನ್, ಇಟಲಿ, ಯುನೈಟೆಡ್ ಕಿಂಗ್‌ಡಮ್, ಜಪಾನ್ ನಾಯಕರು ಭಾಗಿಯಾಗಿದ್ದಾರೆ. ಅಲ್ಲದೆ ಪೋಲೆಂಡ್‌ನ ರಕ್ಷಣಾ ನಾಯಕರು ಕೂಡ ಇದರಲ್ಲಿ ಭಾಗಿಯಾಗಿದ್ದರು. ಜಪಾನ್ ನ್ಯಾಟೋ ಸದಸ್ಯ ರಾಷ್ಟ್ರ ಅಲ್ಲದಿದ್ದರೂ ಸಭೆಯಲ್ಲಿ ಭಾಗಿಯಾಗಿದೆ. ಒಂದು ವೇಳೆ ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ರಶ್ಯಾ ನಡೆಸಿದೆ ಎಂಬುದು ಖಾತ್ರಿಯಾದರೆ ಅ ಸನ್ನಿವೇಶದಲ್ಲಿ ಆರ್ಟಿಕಲ್-೫ ಕಾರ್ಯರೂಪಕ್ಕೆ ಬರಲಿದೆ. ಇದರನ್ವಯ ಯಾವುದೇ ನ್ಯಾಟೋ ಸದಸ್ಯ ರಾಷ್ಟ್ರದ ಮೇಲೆ ಮತ್ತೊಂದು ರಾಷ್ಟ್ರ ದಾಳಿ ನಡೆಸಿದರೆ ಆಗ ಎಲ್ಲಾ ಸದಸ್ಯ ರಾಷ್ಟ್ರಗಳು ಒಂದಾಗಿ, ಅದರ ವಿರುದ್ಧ ಯುದ್ದ ನಡೆಸಲಿದೆ.