ಪೋಲೆಂಡ್‌ಗೆ ಅಪ್ಪಳಿಸಿದ್ದು, ಉಕ್ರೇನ್ ಕ್ಷಿಪಣಿ: ನ್ಯಾಟೋ

ಲಂಡನ್, ನ.೧೭- ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ನಡೆದು, ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಲಭಿಸಿದೆ. ಬಹುಷಃ ಉಕ್ರೇನ್‌ಗೆ ಸೇರಿದ ಕ್ಷಿಪಣಿ ಪೋಲೆಂಡ್‌ಗೆ ಅಪ್ಪಳಿಸಿರಬಹುದು ಎಂದು ಸ್ವತಹ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟನ್‌ಬರ್ಗ್ ತಿಳಿಸಿದ್ದಾರೆ.
ಪೋಲೆಂಡ್‌ಗೆ ಕ್ಷಿಪಣಿ ದಾಳಿ ನಡೆದಿರುವುದು ನ್ಯಾಟೋದ ಆರ್ಟಿಕಲ್ ೫ರ ಸ್ವಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಬಾಲಿಯಲ್ಲಿದ್ದ ವೇಳೆ ನ್ಯಾಟೋ ಸದಸ್ಯ ರಾಷ್ಟ್ರಗಳು ತುರ್ತು ಸಭೆ ನಡೆಸಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿತ್ತು. ಆದರೆ ಆ ವೇಳೆಯಲ್ಲೇ ಕ್ಷಿಪಣಿ ರಷ್ಯಾಗೆ ಸೇರಿದ್ದಲ್ಲ ಎಂಬ ಮಾತು ಹಲವರಿಂದ ವ್ಯಕ್ತವಾಗಿತ್ತು. ಅಲ್ಲದೆ ಸ್ವತಹ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರೇ ಕ್ಷಿಪಣಿಯುವ ರಷ್ಯಾಗೆ ಸೇರಿರುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದರು. ಇದೀಗ ನ್ಯಾಟೋ ಮುಖ್ಯಸ್ಥರೇ ರಶ್ಯಾದ ಪಾತ್ರವನ್ನು ಬಹುತೇಕ ಅಲ್ಲಗಳೆದಿದ್ದಾರೆ. ಬಹುಷಃ ಇದು ಉಕ್ರೇನಿನ ವಾಯು ರಕ್ಷಣಾ ವ್ಯವಸ್ಥೆಗೆ ಸೇರಿರುವ ಕ್ಷಿಪಣಿಯಾಗಿರುವ ಸಾಧ್ಯತೆ ಇದೆ ಎಂದು ಜೆನ್ಸ್ ಸ್ಟೋಲ್ಟನ್‌ಬರ್ಗ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮಂಗಳವಾರ ರಶ್ಯಾವು ಉಕ್ರೇನ್ ಮೇಲೆ ೮೦ಕ್ಕೂ ಹೆಚ್ಚಿನ ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ಹಿನ್ನೆಲೆಯಲ್ಲಿ ಗುರಿತಪ್ಪಿ ಒಂದು ಕ್ಷಿಪಣಿ ಪೋಲೆಂಡ್‌ಗೆ ಬಿದ್ದಿವೆ ಎಂಬ ಮಾತು ಆರಂಭದಲ್ಲಿ ಕೇಳಿಬಂದಿತ್ತು. ಅದೂ ಅಲ್ಲದೆ ಇದು ನಮ್ಮ ಕ್ಷಿಪಣಿ ಅಲ್ಲ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ತಿಳಿಸಿದ್ದರು.