ಪೋಲಿಸ್ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)
ದಾವಣಗೆರೆ, ಆ. ೧೭: ಹಳೆಯ ಇಪಿಎಸ್ ೯೫ ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದ ಇಪಿಎಸ್ ನಾಯಕರ ಮೇಲೆ ದೆಹಲಿ ಪೊಲೀಸರು ನಡೆಸಿದ ದಬ್ಬಾಳಿಕೆ ಖಂಡಿಸಿ ನಗರದ ಕೆಬಿ ಬಡಾವಣೆಯಲ್ಲಿನ ಕಾರ್ಮಿಕ ಮಂತ್ರಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಸಂಸ್ಥೆ, ದಾವಣಗೆರೆ ಜಿಲ್ಲಾ ಕಚೇರಿ ಬಳಿ ಇಪಿಎಸ್ ೯೫ ರಾಷ್ಟ್ರೀಯ ಆಂದೋಲನ ಸಮಿತಿ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ
ಕೆ.ಎಂ. ಮರುಳ ಸಿದಯ್ಯ, ದೇಶದ ಕೈಗಾರಿಕಾ, ಸಾರ್ವಜನಿಕ, ಸಹಕಾರಿ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸಿದ ೭೦ ಲಕ್ಷ ನಿವೃತ್ತ ನೌಕರರು ಅಂದರೆ ಇಪಿಎಸ್ ೯೫ ಪಿಂಚಣಿದಾರರು ಅತಿಅಲ್ಪ ಮೊತ್ತದ ಪಿಂಚಣಿ ಪಡೆಯುತ್ತಿದ್ದು, ನಮ್ಮ ಬೆವರಿನ ಹನಿಯ ಹಣವನ್ನು ಕೊಡಲು ಭವಿಷ್ಯ ನಿಧಿ ಕಚೇರಿಯ ಅಧಿಕಾರಿಗಳು ನಮಗೆ ಸೇರ ಬೇಕಾದ ಪಿಂಚಣಿ ನೀಡುತ್ತಿಲ್ಲ ಎಂದು ಹೇಳಿದರು.ಅತ್ಯಂತ ಹೀನ ಸ್ಥಿತಿಯಲ್ಲಿ ಪಿಂಚಿಣಿದಾರರು ಜೀವನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಿಂಚಿಣಿದಾರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೆಹಲಿಯಲ್ಲಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಲ್ಲಿನ ಪೊಲೀಸರು ಅಮಾನುಷವಾಗಿ ವರ್ತಿಸಿ, ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ಸೇನಾಧಿಕಾರಿ, ಹಿರಿಯ ನಾಗರಿಕರಾದ ಅಶೋಕ ರಾವುತ್ ಅವರನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಆ ಮೂಲಕ ಸಂವಿಧಾನದ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ದೆಹಲಿ ಘಟನೆ ಖಂಡಿಸಿ, ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಇಪಿಎಸ್ ಪಿಂಚಣಿ ಪಡೆಯುವ ನೌಕರರಿಗೆ ಕನಿಷ್ಠ ೭,೫೦೦ ಪಿಂಚಣಿ, ತುಟ್ಟಿಭತ್ಯೆ, ವೈದ್ಯಕೀಯ ಚಿಕಿತ್ಸೆಯ ವೆಚ್ಚ, ಪೂರ್ಣ ಪ್ರಮಾಣದ ಪಿಂಚಣಿ ಜೊತೆ ಇತರೆ ಸವಲತ್ತುಗಳನ್ನು ನೀಡಬೇಕು. ಇಪಿಎಫ್ ಅಧಿಕಾರಿಗಳ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಇಪಿಎಸ್ ೯೫ ಪಿಂಚಣಿದಾರರ ಬೇಡಿಕೆಗಳು ಈಡೇರುತ್ತಿಲ್ಲ. ಈ ಕುರಿತು ದೇಶದ ಪ್ರಧಾನ ಮಂತ್ರಿ, ಕಾರ್ಮಿಕ ಮಂತ್ರಾಲಯ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.