ಪೋಲಿಸರ ದಾಳಿ, ದನದ ವ್ಯಾಪಾರಿಗಳು ಪರಾರಿ

ಸಿಂಧನೂರು ಏ.೨೬-ಕೋವಿಡ್ ನಿಯಮ ಉಲ್ಲಂಘಿಸಿ ಅನಧಿಕೃತ ಜಾನುವಾರುಗಳ ಸಂತೆ ಮೇಲೆ ಪೋಲಿಸರು ,ನಗರಸಭೆ ಅಧಿಕಾರಿಗಳು ದಾಳಿ ಮಾಡಿ ಲಾಠಿ ರುಚಿ ತೋರಿಸಿದಾಗ ವ್ಯಾಪಾರಿಗಳು ಎದ್ದು ಬಿದ್ದು ಭತ್ತದ ಗದ್ದೆಗಳಲ್ಲಿ ಹೋಡಿ ಓದರು.
ನಗರದ ಪಿಡಬ್ಲೂಡಿ ಕ್ಯಾಂಪ್ ಹತ್ತಿರ ಇರುವ ಕೊಂಗನ ಹಟ್ಟಿ ಏರಿಯಾದ ಹುಸೇನ್ ಸಾಬ ಎನ್ನುವವರ ಜಾಗದಲ್ಲಿ ಇಂದು ಬೆಳಿಗ್ಗೆ ಅನಧಿಕೃತವಾಗಿ ದನದ ಸಂತೆ ನಡೆಸಿದ್ದು ಎರಡು ನೂರಕ್ಕೂ ಮೇಲ್ಪಟ್ಟು ದನಗಳು ,೪೦ ಕ್ಕೂ ಮೇಲ್ಪಟ್ಟು ಟಾಟಾ ಎಸಿ ವಾಹನಗಳು ,ನೂರಕ್ಕೂ ಮೇಲ್ಪಟ್ಟು ವ್ಯಾಪಾರಿಗಳು ಜಾನುವಾರುಗಳ ಸಂತೆಗೆ ಬಂದು ಭರ್ಜರಿ ಸಂತೆಯಲ್ಲಿ ತೊಡಗಿದ್ದರು ಆದರೆ ಯಾರೂ ಮಾಸ್ಕ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ , ಕೊರೊನಾ ನಿಯಮ ಉಲ್ಲಂಘಿಸಿ ಜಾನುವಾರುಗಳ ಸಂತೆ ಮಾಡ ತೊಡಗಿದ್ದರು.
ಗಂಗಾವತಿ ,ಕೊಪ್ಪಳ, ಗಿಣಿಗೇರಾ ,ಲಿಂಗಸ್ಗೂರು ,ಸಿರಗುಂಪಾ ,ಮಾನ್ವಿ ಸೇರಿದಂತೆ ಇನ್ನಿತರ ಕಡೆಗಳಿಂದ ಜಾನುವಾರುಗಳನ್ನು ಮಾರಾಟ ಹಾಗೂ ಕೊಂಡುಕೊಳ್ಳಲು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಬಂದಿದ್ದರು.
ಸಾರ್ವಜನಿಕರ ದೂರಿನ ಮಾಹಿತಿ ಮೇರೆಗೆ ಪಿಎಸ್‌ಐ ವಿಜಯಕೃಷ್ಣ, ಸಿಬ್ಬಂದಿಗಳಾದ ಮಹಿಬೂಬ ,ಜಗದೀಶ್ , ಆದಯ್ಯ , ನಗರಸಭೆಯ ಮೇಲ್ವಿಚಾರಕರಾದ ರಾಘವೇಂದ್ರ ,ಕಿರಿಯ ಆರೋಗ್ಯ ಸಹಾಯಕ ಲಕ್ಷ್ಮೀ ಪತಿ ,ಗ್ರಾ.ಲೆ ಯುನಿಸ್ ಈ ಅಧಿಕಾರಿಗಳು ಧಿಡಿರೆನೆ ದಾಳಿ ಮಾಡಿ ಲಾಠಿ ರುಚಿ ತೊರಿಸಿದಾಗ ವ್ಯಾಪಾರಿಗಳು ಹಾಗೂ ಜಾನುವಾರುಗಳನ್ನು ಕೊಂಡು ಕೊಳ್ಳಲು ಬಂದವರು ವಾಹನಗಳು ಹಾಗೂ ಬೈಕ್ ಗಳನ್ನು ಬಿಟ್ಟು ದಿಕ್ಕಪಾಲಾಗಿ ಸ್ಥಳದಿಂದ ಪರಾರಿಯಾಗಿ ಓಡತೊಡಗಿದರು.
ದೂರದ ಊರುಗಳಿಂದ ಬಂದಿದ್ದ ವ್ಯಾಪಾರಿಗಳು ನಮಗೆ ಗೊತ್ತಿಲ್ಲದೆ ಬಂದಿದ್ದು ಇನ್ನೊಂದು ಸಲ ಬರುವದಿಲ್ಲ ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ದನದ ಸಂತೆಗೆ ಜಾಗ ನೀಡಿದ ಹುಸೇನ್ ಸಾಬ್ ನೋಟಿಸ್ ನೀಡುವದಾಗಿ ಗ್ರಾ.ಲೆ ಯುನಿಸ್ ಪತ್ರಿಕೆಗೆ ತಿಳಿಸಿದರು. ಗ್ರಾಮ ಲೆಕ್ಕಾಧಿಕಾರಿ ದೂರ ನೀಡಿದರೆ ಮುಂದಿನ ಕ್ರಮ ತೆಗೆದುಕೊಳ್ಳುವದಾಗಿ ಪತ್ರಿಕೆಗೆ ತಿಳಿಸಿದರು.