ಪೋಪ್ ಫ್ರಾನ್ಸಿಸ್ ಆಸ್ಪತ್ರೆಗೆ ದಾಖಲು

ವ್ಯಾಟಿಕನ್ ಸಿಟಿ, ಮಾ.೩೦- ಪೋಪ್ ಫ್ರಾನ್ಸಿಸ್ (೮೬) ಅವರು ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದು, ಹಾಗಾಗಿ ರೋಮ್‌ನಲ್ಲಿನ ಆಸ್ಪತ್ರೆಯಲ್ಲಿ ಕೆಲದಿನಗಳ ಕಾಲ ಉಳಿಯಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಆದರೆ ಅವರಿಗೆ ಕೋವಿಡ್ ಸೋಂಕಿಲ್ಲ ಎಂದು ವ್ಯಾಟಿಕನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಪೋಪ್ ಫ್ರಾನ್ಸಿಸ್ ಅವರ ಚೇತರಿಕೆಗೆ ಪ್ರಾರ್ಥಿಸುವಂತೆ ಕೇಳಿಕೊಂಡಿದ್ದಾರೆ.
ಪೋಪ್ ಅವರಿಗೆ ಕೆಲವು ದಿನಗಳ ಸೂಕ್ತ ಆಸ್ಪತ್ರೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಪೋಪ್ ಅವರಿಗೆ ಅನೇಕ ಚೇತರಿಕೆಯ ಹಾರೈಕೆ ಸಂದೇಶಗಳು ಸಿಕ್ಕಿವೆ. ಪೋಪ್ ಅವರು ನಿಕಟತೆ ಮತ್ತು ಪ್ರಾರ್ಥನೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವ್ಯಾಟಿಕನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ಪೋಪ್ ಫ್ರಾನ್ಸಿಸ್ ಅವರು ನಿಗದಿತ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ವ್ಯಾಟಿಕನ್‌ನ ಅಧಿಕೃತ ಖಾತೆ ಆರಂಭದಲ್ಲಿ ತಿಳಿಸಿತ್ತು. ಆದರೆ ಟಿವಿಯಲ್ಲಿ ಅವರ ಸಂದರ್ಶನವನ್ನು ರದ್ದುಪಡಿಸಿದ ಬಳಿಕ ಇಟಲಿಯ ಕೆಲವು ಮಾಧ್ಯಮಗಳು ಈ ಖಾತೆಯನ್ನು ಪ್ರಶ್ನೆ ಮಾಡಿದ್ದವು. ಪೋಪ್ ಅವರು ಇಲ್ಲಿನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗುವ ಹಿನ್ನೆಲೆಯಲ್ಲಿ ಭದ್ರತೆ ಸೇರಿದಂತೆ ಅವರ ಹತ್ತಿರದ ಸಿಬ್ಬಂದಿಯು ಆಸ್ಪತ್ರೆಯಲ್ಲಿ ರಾತ್ರಿ ತಂಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಪ್ರಸಕ್ತ ವರ್ಷದ ಈ ಸಮಯವು ಪೋಪ್ ಅವರಿಗೆ ಅತ್ಯಂತ ಜನನಿಬಿಡ ಸಮಯವಾಗಿದೆ. ಮುಂದಿನ ಈಸ್ಟರ್ ವಾರಾಂತ್ಯಕ್ಕೆ ಮುಂಚಿತವಾಗಿ ಅನೇಕ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಈ ವಾರಾಂತ್ಯದಲ್ಲಿ ಪಾಮ್ ಭಾನುವಾರ ಪ್ರಾರ್ಥನೆ, ಬಳಿಕ ಮುಂದಿನ ವಾರ ಪವಿತ್ರ ವಾರ ಮತ್ತು ಈಸ್ಟರ್ ಆಚರಣೆಗಳನ್ನು ನಿಗದಿಪಡಿಸಲಾಗಿದೆ. ಅದೂ ಅಲ್ಲದೆ ಎಪ್ರಿಲ್‌ನಲ್ಲಿ ಪೋಪ್ ಹಂಗೆರಿಗೆ ಭೇಟಿ ನೀಡಲಿದ್ದಾರೆ. ಇನ್ನು ಬುಧವಾರ ಬೆಳಗ್ಗೆ ಸೈಂಟ್ ಪೋಟರ್ಸ್ ಸ್ಕ್ವೇರ್‌ನಲ್ಲಿ ತಮ್ಮ ಸಾಪ್ತಾಹಿಕ ಸಾಮಾನ್ಯ ಪ್ರೇಕ್ಷಕರ ಪೋಪ್ ಫ್ರಾನ್ಸಿಸ್ ಅವರು ಅಧ್ಯಕ್ಷತೆ ವಹಿಸಿದ್ದು, ಹೆಚ್ಚಿನ ಉತ್ಸಾಹದಲ್ಲಿ ಕಾಣಿಸಿಕೊಂಡಿದ್ದರು.