ಪೋತ್ನಾಳ್ : ಮೂಲಭೂತ ಸೌಲಭ್ಯ ಕಲ್ಪಿಸಲು ಸಚಿವರಿಗೆ ಮನವಿ


ಮಾನ್ವಿ.ನ.೩- ಮಾನ್ವಿ ತಾಲೂಕಿನ ಅತಿ ದೊಡ್ಡ ಗ್ರಾಮವಾದ ಪೋತ್ನಾಳ್‌ನಲ್ಲಿ ಮುನಿರಾಬಾದ್ ಮಹೆಬೂಬ್‌ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ನಿಲ್ದಾಣ ಕೇಂದ್ರದ ಮಂಜೂರು ಹಾಗೂ ಬಸ್ ನಿಲ್ದಾಣ, ಶಾಶ್ವತ ಕುಡಿಯುವ ನೀರಿನ ಯೋಜನೆ, ಮೊರಾರ್ಜಿ ವಸತಿ ಶಾಲೆಗೆ ಕಟ್ಟಡ ಮಂಜೂರು ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೂಡಬೇಕೆಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿಗೆ ಪೋತ್ನಾಳ್ ಗ್ರಾಮದ ಹೋರಾಟ ಸಮನ್ವಯ ಸಮಿತಿ ಮುಖಂಡರು ಮನವಿಯನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹೋರಾಟ ಸಮನ್ವಯ ಸಮಿತಿ ಮುಖಂಡ ಹೆಚ್.ಶರ್ಫುದ್ದೀನ್ ಪೋತ್ನಾಳ್ ಅವರು ೧೯೯೦ ಮುನಿರಾಬಾದ್-ಮಹೆಬೂಬ್‌ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೆ ಅಡಿಗಲ್ಲು ಹಾಕಿದಾಗನಿಂದ ಇಲ್ಲಿಯವರೆಗೂ ಪೋತ್ನಾಳ್ ಹತ್ತಿರ ರೈಲ್ವೆ ನಿಲ್ದಾಣ ಸ್ಥಾಪನೆಗೆ ಒತ್ತಾಯಪಡಿಸುತ್ತ ಬರಲಾಗಿದೆ. ಆದರೆ ಇದುವರೆಗೂ ಪೋತ್ನಾಳ್ ಬಳಿ ರೈಲ್ವೆ ನಿಲ್ದಾಣ ಕೇಂದ್ರ ಸ್ಥಾಪನೆಯ ಬೇಡಿಕೆ ಈಡೇರಿಕೆಗೆ ರಾಜ್ಯ ರೈಲ್ವೆ ಖಾತೆ ಸಚಿವ ದಿ.ಸುರೇಶ ಅಂಗಡಿ, ರಾಯಚೂರು ಸಂಸದ ರಾಜಾಅಮರೇಶ್ವರನಾಯಕ, ರಾಜ್ಯಸಭಾ ಸದಸ್ಯ ದಿ.ಅಶೋಕ ಗಸ್ತಿ ಸೇರಿದಂತೆ ಈ ಭಾಗದ ಶಾಸಕರಿಗೆ, ಇತರೆ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಈ ವರ್ಷದಲ್ಲಿ ಪೋತ್ನಾಳ್ ಗ್ರಾಮದಲ್ಲಿ ರೈಲ್ವೆ ಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದು ರೈಲ್ವೆ ನಿಲ್ದಾಣ ಮಂಜೂರಾತಿಗೆ ಪ್ರಾಮುಖ್ಯತೆ ನೀಡಬೇಕು ಹಾಗೂ ರೈಲ್ವೆ ನಿಲ್ದಾಣವನ್ನು ಊರಲಗಡ್ಡಿ ಸೀಮಾದಲ್ಲಿ ನಿರ್ಮಿಸಬೇಕು ಮತ್ತು ತೀರಾ ಶಿಥಿಲಾವಸ್ಥೆಯಲ್ಲಿರುವ ಗ್ರಾಮ ಪಂಚಾಯತನ್ನು ಬೇರೆ ಕಡೆ ಸ್ಥಳಾಂತರಿಸಿ ಗ್ರಾ.ಪಂ.ಜಾಗದಲ್ಲಿ ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಮಾಡಬೇಕು, ಕೆಕೆಆರ್‌ಡಿಬಿ ೧.೩೫ ಕೋಟಿ ಅನುದಾನದಲ್ಲಿ ಪದವಿ ಪೂರ್ವ ಕಾಲೇಜ್ ಕಟ್ಟಡವನ್ನು ಪೋತ್ನಾಳ್ ಗ್ರಾಮದ ಸ.ನಂ.೧೮೨ ರ ೨.೭ ಎಕರೆ ನಿರ್ಮಿಸಬೇಕು ಮತ್ತು ಶಾಶ್ವತವಾದ ಕುಡಿಯುವ ನೀರಿನ ಸೌಕರ್‍ಯ ಒದಗಿಸಬೇಕೆಂದು ಹೆಚ್.ಶರ್ಫುದ್ದೀನ್ ಒತ್ತಾಯಿಸಿದರು.
ಪೋತ್ನಾಳ್ ಗ್ರಾಮವು ಬೌಗೋಳಿಕವಾಗಿ ಮಾನ್ವಿ ತಾಲೂಕಿನ ೧೫ಕ್ಕೂ ಹೆಚ್ಚು ಗ್ರಾಮಗಳು ಮತ್ತು ಸಿಂಧನೂರು ತಾಲೂಕಿನ ೨೦ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಲ್ಪಿಸುವ ದೊಡ್ಡ ಗ್ರಾಮ ಇದಾಗಿದ್ದು ಈ ಎಲ್ಲಾ ಗ್ರಾಮಗಳ ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರಿಗೆ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಕೇಂದ್ರ ಬಿಂದುವಾಗಿದೆ. ಈ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು, ಪಾಲಿಟೆಕ್ನಿಕ್, ಪ್ರಾಥಮಿಕ, ಫ್ರೌಢಶಾಲೆ, ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಸಿಎಂ ವಸತಿ ನಿಲಯ ಸೇರಿದಂತೆ ಅನೇಕ ರೀತಿಯ ವ್ಯಾಪಾರ ವಹಿವಾಟುಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿದ್ದು ಕೂಡಲೇ ಪೋತ್ನಾಳ್ ಗ್ರಾಮದ ಹೋರಾಟ ಸಮನ್ವಯ ಸಮಿತಿ ಮನವಿ ಮೇರೆಗೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖಂಡರಾದ ಕೆ.ಎಸ್.ಕುಮಾರಸ್ವಾಮಿ ಪೋತ್ನಾಳ್, ಎಂ.ಮಲ್ಲಿಕಾರ್ಜುನಗೌಡ ಪೋತ್ನಾಳ್ ತಿಳಿಸಿದರು.
ಈ ವೇಳೆ ಮಾಜಿಶಾಸಕ ಬಸನಗೌಡ ಬ್ಯಾಗವಾಟ್, ಬಿಜೆಪಿ ಜಿಲ್ಲಾಪ್ರಧಾನಕಾರ್ಯದರ್ಶಿ ಶರಣಪ್ಪಗೌಡ ನಕ್ಕುಂದಿ, ಪೋತ್ನಾಳ್ ಗ್ರಾಮದ ಮುಖಂಡರಾದ ಹೆಚ್.ಶರ್ಫುದ್ದೀನ್ ಪೋತ್ನಾಳ್, ಕೆ.ಎಸ್.ಕುಮಾರಸ್ವಾಮಿ, ಎಂ.ಮಲ್ಲಿಕಾರ್ಜುನಗೌಡ, ವಿರೂಪಾಕ್ಷಿಗೌಡ ಪೋತ್ನಾಳ್, ಶಿವಪ್ಪ ಭೂಸಾರಿ, ಸೂಗುರೆಡ್ಡಿ, ಬಸವರಾಜ ಗುಜ್ಜಲ್, ತಿರುಪತಿನಾಯಕ, ಶಿವಕುಮಾರೆಡ್ಡಿ, ವಿ.ಮಂಜುನಾಥ, ಅಮರೇಶ ಗುಜ್ಜಲ್, ಶಿವು ರಾಯಚೂರು, ಚನ್ನಪ್ಪ, ಯಂಕೋಬನಾಯಕ ಸೇರಿದಂತೆ ಇನ್ನಿತರರಿದ್ದರು.