ಪೋತಲಕಟ್ಟೆ ಶಾಲೆ ಉನ್ನತೀಕರಣ: ಗ್ರಾಮಸ್ಥರ ಸಂತಸ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜೂ.30: ಪಟ್ಟಣಕ್ಕೆ ಸಮೀಪದ ಪೋತಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಿಕ್ಷಣ ಇಲಾಖೆ ಮೇಲ್ದರ್ಜೆಗೆ ಏರಿಸಿ ಆದೇಶಿಸಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
1950ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಪ್ರಸ್ತುತ 415 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆ ಉನ್ನತೀಕರಿಸಿದ್ದರಿಂದ 40 ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕಾಗಿ (9,10ನೇ ತರಗತಿಗೆ)ಬೇರೆ ಶಾಲೆಗೆ ಹೋಗುವುದು ತಪ್ಪಿದಂತಾಗಿದೆ.  ಗ್ರಾಮದ ವಿದ್ಯಾರ್ಥಿಗಳು ಸ್ಥಳೀಯ ಶಾಲೆಯಲ್ಲಿ 8ನೇತರಗತಿವರೆಗೆ ಅಭ್ಯಾಸಮಾಡಿ ಮುಂದಿನ ತರಗತಿಗೆ ಸಮೀಪದ ತೆಲುಗುಬಾಳು ಶಾಲೆಗೆ ಹೋಗುತ್ತಿದ್ದರು, ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾರಣ ತೆಲುಗುಬಾಳು ಶಾಲೆಗೆ ಕಳುಹಿಸಲು ಬಹುತೇಕ ಮಕ್ಕಳ ಪಾಲಕರು ಶಾಲೆಗೆ ಕಳುಹಿಸದ ಕಾರಣ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಸರ್ಕಾರ ಶಾಲೆಯನ್ನು ಉನ್ನತಿಕರಿಸಿದ್ದರಿಂದ ಗ್ರಾಮದ ಮಕ್ಕಳಿಗೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಪಕ್ಕದ ಸಂಡೂರು ತಾಲೂಕಿನ ಗ್ರಾಮಗಳಾದ ಕೊಂಡಾಪುರ, ಗಿರ್ನಳ್ಳಿ, ಮಲ್ಲಾಪುರ ಗ್ರಾಮಗಳ ವಿದ್ಯಾರ್ಥಿಗಳು ಪೋತಲಕಟ್ಟೆ ಗ್ರಾಮಕ್ಕೆ ಕೂಗಳತೆಯಲ್ಲಿವೆ. ಈ ಗ್ರಾಮಗಳ ವಿದ್ಯಾರ್ಥಿಗಳಿಗೂ ಈ ಶಾಲೆ ಉನ್ನತೀಕರಿಸಿದ್ದು ಅನುಕೂಲಕರವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.