ಪೋಕ್ಸೊ ಪ್ರಕರಣ:ಸಿಐಡಿ ಎದುರು ಬಿಎಸ್‌ವೈ ವಿಚಾರಣೆಗೆ ಹಾಜರು

ಹೇಳಿಕೆ ದಾಖಲು

(ಸಂಜೆವಾಣಿ ಪ್ರತಿನಿಧಿಯಿಂದ)

ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಿಐಡಿ ಕಚೇರಿಗೆ ವಿಚಾರಣೆಗೆ ಕಾರಿನಲ್ಲಿ ಆಗಮಿಸಿದರು.

ಬೆಂಗಳೂರು,ಜೂ.೧೭-ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಇಂದು ಸಿಐಡಿ ಅಧಿಕಾರಿಗಳಮುಂದೆ ವಿಚಾರಣೆಗೆ ಹಾಜರಾದರು.
ಈ ಪ್ರಕರಣದಲ್ಲಿ ಯಡಿಯೂರಪ್ಪರವರನ್ನು ಬಂಧಿಸದಂತೆ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಂಧನದ ಭೀತಿ ಇಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಮುಖ್ಯಕಚೇರಿಗೆ ತಮ್ಮ ವಕೀಲರ ಜತೆ ಬೆಳಿಗ್ಗೆ ೧೧ರ ಸುಮಾರಿಗೆ ಹಾಜರಾದ ಯಡಿಯೂರಪ್ಪರವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ನೀಡಿದ್ದಲ್ಲದೆ ಸಿಐಡಿ ಅಧಿಕಾರಿಗಳ ಪ್ರಶ್ನೆಗೂ ಉತ್ತರ ನೀಡಿದರು.
ಪ್ರಕರಣ ನಡೆದ ಸಂದರ್ಭದಲ್ಲಿ ಯಾರೆಲ್ಲ ಬಂದಿದ್ದರು, ಅಂದು ಏನಾಯಿತು ಇತ್ಯಾದಿ ಪ್ರಕರಣದ ಮಾಹಿತಿಯನ್ನು ಯಡಿಯೂರಪ್ಪ ಅವರಿಂದ ಸಿಐಡಿ ಅಧಿಕಾರಿಗಳು ಪಡೆಯಲಿದ್ದಾರೆ. ಇದೊಂದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಯಡಿಯೂರಪ್ಪ ಈಗಾಗಲೇ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಯಡಿಯೂರಪ್ಪ ಅವರು ಇಂದೂ ಕೂಡ ಪ್ರತಿ ದಿನ ಏಳುವಂತೆ ಐದು ಗಂಟೆಗೆ ಎದ್ದು ಬೆಳಿಗ್ಗೆ ಮನೆಯ ಬಳಿ ವಾಕಿಂಗ್ ಮಾಡಿ, ಬಳಿಕ ದಿನ ಪತ್ರಿಕೆ ಓದಿದ್ದಾರೆ. ಒಂಬತ್ತು ಗಂಟೆಗೆ ವಕೀಲ ಸಂದೀಪ್ ಪಾಟೀಲ್ ಅವರು ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿದ್ದು, ವಕೀಲರ ಜತೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಚರ್ಚೆ ನಡೆಸಿದರು.
ಸುಮಾರು ಹನ್ನೊಂದು ಗಂಟೆಗೆ ವಕೀಲ ಸಂದೀಪ್ ಪಾಟೀಲ್ ಜೊತೆಗೆ ಯಡಿಯೂರಪ್ಪ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದರು.
ಹೈಕೋರ್ಟ್ ರಿಲೀಫ್:
ಬಂಧನದ ಭೀತಿಯಲ್ಲಿದ್ದ ಬಿಎಸ್‌ವೈ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿತ್ತು. ಹೈಕೋರ್ಟ್‌ನ ಮುಂದಿನ ವಿಚಾರಣೆವರೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಆದೇಶ ಹೊರಡಿಸಿತ್ತು. ಇದರಿಂದಾಗಿ, ಸಿಐಡಿ ಅಧಿಕಾರಿಗಳಿಂದ ಬಂಧನದ ಭೀತಿಯಲ್ಲಿ ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಿದೆ. ಆದರೆ, ಜೂನ್ ೧೭ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಯಡಿಯೂರಪ್ಪ ಅವರಿಗೆ ಕೋರ್ಟ್ ಸೂಚಿಸಿತ್ತು.
ಪ್ರಕರಣದಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಜೂನ್ ೧೭ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರೂ ಕೋರ್ಟ್ ಹೋಗಿ ಅರೆಸ್ಟ್ ವಾರಂಟ್ ತಂದಿದ್ದೀರಿ. ನಾಲ್ಕು ದಿನ ತಡವಾಗಿ ವಿಚಾರಣೆಗೆ ಹಾಜರಾಗಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಹಾಗಾಗಿ, ಅರೆಸ್ಟ್ ವಾರಂಟ್ ಬಗ್ಗೆ ನಮಗೆ ಅನುಮಾನವಿದೆ. ಮುಂದಿನ ವಿಚಾರಣೆವರೆಗೂ ಯಡಿಯೂರಪ್ಪ ಅವರನ್ನು ಬಂಧಿಸಬಾರದು” ಎಂಬುದಾಗಿ ಏಕಸದಸ್ಯ ಪೀಠವು ಆದೇಶ ಹೊರಡಿಸಿತ್ತು.
ಏನಿದು ಪ್ರಕರಣ:
೨೦೨೪ರ ಫೆಬ್ರವರಿ ೨ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ೧೭ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ ೧೪ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್ ೧೨ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್ ೧೧ರಂದೇ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಬಿಎಸ್‌ವೈ ಬಾಕ್ಸ್ ಪುನೀತ್ ತನಿಖಾಧಿಕಾರಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ಕುರಿತಂತೆ ತನಿಖಾಧಿಕಾರಿಯನ್ನಾಗಿ ಡಿವೈಎಸ್ಪಿ ಪುನೀತ್ ಅವರನ್ನು ನೇಮಕ ಮಾಡಲಾಗಿದೆ.
ಈ ಮೊದಲು ಸಿಐಡಿಗೆ ವರ್ಗಾವಣೆಗೊಂಡ ಬಳಿಕ ಡಿವೈಎಸ್ಪಿ ಪೃಥ್ವಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಈಗ ಪೃಥ್ವಿ ಅವರು ಸಿಐಡಿಯಿಂದ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯನ್ನಾಗಿ ಡಿವೈಎಸ್ಪಿ ಪುನೀತ್ ನೇಮಕಗೊಂಡಿದ್ದಾರೆ. ಈಗ ಯಡಿಯೂರಪ್ಪರವರನ್ನು ವಿಚಾರಣೆ ನಡೆಸಲಿದ್ದಾರೆ.