ಪೋಕರಿಗಳ ಪುಂಡಾಟಿಕೆ ನಿಯಂತ್ರಣಕ್ಕೆ ಮನವಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ. 2 :- ಶಾಲಾಕಾಲೇಜ್ ಗೆ ಹೋಗಿಬರುವ ವಿದ್ಯಾರ್ಥಿನೀಯರನ್ನು ಚುಡಾಯಿಸುತ್ತ ಬಸ್ ನಿಲ್ದಾಣದಲ್ಲಿ ಛೇಡಿಸುತ್ತಿರುವ ಪೋಕರಿ ಯುವಕರ ಪುಂಡಾಡಿಕೆ ಜೋರಾಗಿದ್ದು ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ಅಧಿಕಾರಿಗಳು 112 ವಾಹನದ ಸಹಾಯದ ಮೂಲಕ ಮುಂದಾಗುವಂತೆ ಕಾವಲಿಶಿವಪ್ಪನಾಯಕ  ಹಾಗೂ ಇತರರು ದಲಿತ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ಸಭೆಯಲ್ಲಿ ಭಾಗವಹಿಸಿ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮೀಣ ಭಾಗದ ದಲಿತರ ಹಾಗೂ ಇತರೆ ಸಮುದಾಯದ ಹೆಣ್ಣು ಮಕ್ಕಳು ಶಾಲಾಕಾಲೇಜುಗಳಿಗೆ ಬರುತ್ತಿದ್ದು ಗುಡೇಕೋಟೆ ರಸ್ತೆಯಲ್ಲಿರುವ ಶಾಲಾ ಕಾಲೇಜ್ ಹೋಗುವ ಬರುವ ಹೆಣ್ಣುಮಕ್ಕಳನ್ನು ಜೋರಾಗಿ ಬೈಕ್ ರೈಡ್ ಮಾಡುತ್ತ, ಚುಡಾಯಿಸುತ್ತ ಪುಂಡಪೋಕರಿಗಳು ಓಡಾಡುತ್ತಿದ್ದು ಅಲ್ಲದೆ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಧೂಮಪಾನ ಸೇವನೆ ಅಲ್ಲಿರುವ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಅನುಚಿತ ವರ್ತನೆ ಮಾಡುತ್ತ ಚುಡಾಯಿಸುವ ಪೋಕರಿಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು 112 ವಾಹನದ ಸಹಾಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ಶಾಲಾಕಾಲೇಜಿನ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಿ ಪೋಕರಿಗಳ ಪುಂಡತನ ನಿಯಂತ್ರಿಸುವಂತೆ ಮನವಿ ಮಾಡಲಾಯಿತು.
ಶಾಲಾ ಮೈದಾನ ಆವರಣದಲ್ಲಿ ವಾಮಾಚಾರ : ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಅನೇಕರು ವಾಯುವಿಹಾರ, ಜಾಗಿಂಗ್ ಹಾಗೂ ವಾಲಿಬಾಲ್, ಕ್ರಿಕೆಟ್ ಹಾಗೂ ಇತರೆ ಕ್ರೀಡೆಗಳು ಆಡುವ ಮೈದಾನವಾಗಿದ್ದು ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನಗಳಲ್ಲಿ ವಾಮಾಚಾರ ಮಾಡುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದು ಅಲ್ಲದೆ ಕೆಲವರು ಮದ್ಯಪಾನ ಸೇವನೆ ಮಾಡಿ ಕುಡಿದ ಅಮಲಿನಲ್ಲಿ ಬಾಟಲಿ ಹೊಡೆದು ಗಾಜಿನ ಚೂರುಗಳು ಮೈದಾನದಲ್ಲಿ ಬಿದ್ದು ಜಾಗಿಂಗ್ ಮಾಡುವ ಯುವಕರಿಗೆ ಇದರಿಂದ ಗಾಯಗಳಾಗಬಹುದಾಗಿದೆ ಇದರ ನಿಯಂತ್ರಣ ಆಗಬೇಕಾಗಿದೆ ಎಂದು ಅಜೇಯ ಇತರರು ತಿಳಿಸಿದರು.
ಗಾಂಜಾ ಘಾಟು, ದಾರಿ ತಪ್ಪುತ್ತಿರುವ ಯುವಕರು : ಪಟ್ಟಣದಲ್ಲಿ ಗಾಂಜಾ ಘಾಟು ಜಾಸ್ತಿಯಾಗುತ್ತಿದ್ದು ಕಾಳಸಂತೆಯಲ್ಲಿ ಇದು ಸಿಗುತ್ತಿದ್ದು ಇದನ್ನು ಸೇವಿಸುವ ಮೂಲಕ ಯುವಕರು ಪಾಲಕ ಪೋಷಕರ ನಿಯಂತ್ರಣಕ್ಕೂ  ಸಿಗದೇ ಹಾದಿ ತಪ್ಪುತ್ತಿರುವ ಜೊತೆಗೆ ಜೋರಾಗಿ ರಸ್ತೆಗಳಲ್ಲಿ ಬೈಕ್ ರೈಡ್ ಮಾಡುವುದು ಮತ್ತು ಯುವತಿಯರನ್ನು ಚುಡಾಯಿಸುವ ಮಟ್ಟಕ್ಕೆ ತಲುಪಿದ್ದಾರೆ ಈ ಗಾಂಜಾ ಘಾಟು ನಿಲ್ಲಬೇಕು ಹಾದಿ ತಪ್ಪುವ ಯುವಕರ ಭವಿಷ್ಯ ಬದಲಾಗಬೇಕಿದೆ ಎಂದು ಸಿಪಿಐ ಪಕ್ಷದ ಮುಖಂಡ ಹೆಚ್ ವೀರಣ್ಣ ಹಾಗೂ ಇತರರು ತಿಳಿಸಿದರು.
ಸಂತೆ ಮೈದಾನದಲ್ಲಿ ಮೊಬೈಲ್ ಹಾಗೂ ಹಣ ಕಳುವು : ಪಟ್ಟಣದಲ್ಲಿ ಪ್ರತಿ ಶುಕ್ರವಾರ ಬೆಂಗಳೂರು ರಸ್ತೆಯ ಕೊತ್ತಲಅಂಜನೇಯ ಮೈದಾನದ ಆವರಣದಲ್ಲಿ ವಾರದ ಸಂತೆ ನಡೆಯುವ ದಿನ ಜನಸಂದಣಿ ಅರಿತ ಕಳ್ಳರು ಮೊಬೈಲ್ ಹಾಗೂ ಹಣವನ್ನು ಕಳುವು ಮಾಡುತ್ತಿದ್ದು ಇದರ ನಿಯಂತ್ರಣ ಮಾಡಬೇಕಿದೆ ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದರು ಹಾಗೂ ಹಿರೇಹೆಗ್ಡಾಳ್ ಗ್ರಾಮದ ಶಾಲಾವಾರಣದಲ್ಲಿ ಮದ್ಯವ್ಯಸನಿಗಳ ಪುಂಡಾಟಿಕೆ ಜೋರಾಗಿದೆ ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಹಿರೇಹೆಗ್ಡಾಳ್ ಮಹೇಶ ಇತರರು ತಿಳಿಸಿದರು.
 ನಿಯಂತ್ರಣಕ್ಕೆ ಬದ್ದ ಡಿವೈಎಸ್ ಪಿ ಪ್ರತ್ಯುತ್ತರ : ಸಭೆಯ ಎಲ್ಲಾ ಮುಖಂಡರ ಮನವಿ ಆಲಿಸಿದ ನೂತನವಾಗಿ ಆಗಮಿಸಿದ ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ತಮ್ಮ ಹಾಗೂ ಸಭೆಯ ಮುಖಂಡರ ಪರಿಚಯ ಮಾಡಿಕೊಂಡು ಮುಖಂಡರ ಮನವಿಯಂತೆ ಎಲ್ಲವುಗಳನ್ನೂ ಕಿರಿಯ ಅಧಿಕಾರಿಗಳ ಸಹಾಯದ ಮೂಲಕ ನಿಯಂತ್ರಣ ಮಾಡುವಲ್ಲಿ ಬದ್ದವಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ, ಕೂಡ್ಲಿಗಿ ಪಿಎಸ್ಐ ಧನುಂಜಯ ಉಪಸ್ಥಿತರಿದ್ದರು. ಮುಖಂಡರಾದ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್ ಸುರೇಶ, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ, ಗುನ್ನಳ್ಳಿ ಶ್ರೀಧರ, ನಾಗರಾಜ, ಗೋಣೆಪ್ಪ, ಈಚಲಬೊಮ್ಮನಹಳ್ಳಿ ಈಡಿಗರ ಸಂತೋಷ, ಸಾಲುಮನಿ ರಾಘವೇಂದ್ರ ಸೇರಿದಂತೆ ಇತರರು ದಲಿತರ ಸಭೆಯಲ್ಲಿ ಹಾಜರಿದ್ದರು.