ಪೊಲೀಸ್ ಹುದ್ದೆಗೆ ಡಿಪ್ಲೊಮಾ, ಐಟಿಐ, ಜೆಓಡಿಸಿ ಕಡ್ಡಾಯ ಸರಿಯಲ್ಲ: ಶಶಿಧರ್ ಪೂಜಾರ

ಹರಪನಹಳ್ಳಿ.ಜೂ.೨; ಕೊರೋನಾ ಸಂಕಷ್ಟದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನಿಸಿರುವುದು  ನಿರುದ್ಯೋಗಿಗಳಿಗೆ ಆಶಾ ಕಿರಣವಾಗಿದೆ. ಆದರೆ ಈ ನೇಮಕಾತಿಗೆ ಪಿಯುಸಿ ವಿದ್ಯಾರ್ಹತೆಯನ್ನಾಗಿ ಮಾಡಿ ಅದರ ಜೊತೆ‌ ತತ್ಸಮಾನವಾಗಿ ಡಿಪ್ಲೊಮಾ, ಐಟಿಐ, ಜೆಓಡಿಸಿ ಸೇರಿದಂತೆ  ಎನ್ಐಓಎಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿದ್ದು ಸರಿಯಲ್ಲ. ಕೂಡಲೆ ಈ ನೇಮಕಾತಿಗೆ ಎನ್ಐಒಎಸ್ ಪ್ರಮಾಣ ಪತ್ರ ಕಡ್ಡಾಯ ಗೊಳಿಸಿದ್ದನ್ನು ರದ್ದುಗೊಳಿಸಬೇಕು ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಹಾಗೂ ಪ್ರಕೃತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶಶಿಧರ್ ಪೂಜಾರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿವಿಧ ಪೊಲೀಸ್ ಹುದ್ದೆಗಳಿಗೆ ಪಿಯುಸಿ ವಿದ್ಯಾರ್ಹತೆಯನ್ನಾಗಿ ಮಾಡಿ ಅದರ ಜೊತೆ‌ ತತ್ಸಮಾನವಾಗಿ ಡಿಪ್ಲೊಮಾ, ಐಟಿಐ, ಜೆಓಡಿಸಿ ಸೇರಿದಂತೆ ಎನ್ಐಓಎಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿದ್ದು ಸರಿಯಲ್ಲ ಎಂದಿದ್ದಾರೆ.  ಇಂತಹ ಪದ್ದತಿ ಬೇರಾವ ರಾಜ್ಯದ ನೇಮಕಾತಿ ಪ್ರಕ್ರಿಯೆಗಳಲ್ಲಿಲ್ಲ. ಅಲ್ಲದೆ ಈ ಪರೀಕ್ಷೆ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿರುವುದು ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತೊಂದು ರೀತಿಯಲ್ಲಿ ತೊಂದರೆಯಾಗಲಿದೆ. ಇದರಿಂದಾಗಿ ಅನೇಕ ಪ್ರತಿಭಾವಂತರು ಪೊಲೀಸ್ ಪರೀಕ್ಷೆಯಿಂದ ವಂಚಿತರಾಗಬೇಕಾಗುತ್ತದೆ ಎಂದು ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.