ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆಗೆ ಕಮಿಷನರ್ ಚಾಲನೆ

ಮಂಗಳೂರು, ಎ.೨೨- ಕೋವಿಡ್ ಎರಡನೆ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊರೋನ ವಾರಿಯರ್ಸ್ ಗಳಾಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುವ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿ ಆವರಣದಲ್ಲಿ ನಿನ್ನೆ ಚಾಲನೆ ನೀಡಲಾಯಿತು.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ಈ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ಪಾಳಿಗಳಲ್ಲಿ ರಾತ್ರಿ ಹಗಲೆನ್ನದೆ ಸೇವೆ ಸಲ್ಲಿಸುವ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸಿಬ್ಬಂದಿಗೆ ಅನುಕೂಲವಾಗುವಂತೆ ಈ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಪ್ರತಿನಿತ್ಯ ಕನಿಷ್ಠ ೨೫೦ರಿಂದ ೩೦೦ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡಲು ಸದ್ಯ ನಿರ್ಧರಿಸಲಾಗಿದ್ದು, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತರ ಕರ್ನಾಟಕದ ೧೦೦೦ಕ್ಕೂ ಅಧಿಕ ಮಂದಿ ಸೇರಿ ಸಿಬ್ಬಂದಿ ಸೇರಿದಂತೆ ೨೦೦೦ದಷ್ಟು ಸಿಬ್ಬಂದಿ ಸೇವೆಯಲ್ಲಿದ್ದಾರೆ. ಕೋವಿಡ್ ಎರಡನೆ ಅಲೆಯ ಹಿನ್ನೆಲೆಯಲ್ಲಿ ಸರಕಾರ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ರಾತ್ರಿ ಕರ್ಫ್ಯೂ ೯ರಿಂದ ಬೆಳಗ್ಗೆ ೬ ಗಂಟೆ ಹಾಗೂ ವೀಕೆಂಡ್ ಕರ್ಫ್ಯೂ ಕೂಡಾ ಜಾರಿಗೊಳಿಸಲಾಗಿದೆ. ಈ ಕಾರಣದಿಂದ ಸರಕಾರದ ಕೋವಿಡ್ ನಿಯಮ ಪಾಲನೆಯೊಂದಿಗೆ ಇಲ್ಲಿ ಮಧ್ಯಾಹ್ನ ೧೧ ಗಂಟೆಯಿಂದ ೩ ಗಂಟೆಯವರೆಗೆ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಇಲಾಖೆಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಬಹಳಷ್ಟು ಯುವಕರು, ಅವಿವಾಹಿತರು ಇದ್ದು, ಕೆಲವರು ತಮ್ಮ ಪೋಷಕರ ಜತೆ ಇಲ್ಲೇ ವಾಸವಾಗಿದ್ದರು. ಆದರೆ ಕೋವಿಡ್ ಕಾರಣದಿಂದ ಹಲವರು ತಮ್ಮ ಕುಟುಂಬಸ್ಥರನ್ನು ಈಗಾಗಲೇ ಊರುಗಳಿಗೆ ಕಳುಹಿಸಿದ್ದಾರೆ. ಸದ್ಯ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುವ ವ್ಯವಸ್ಥೆ ಇಲ್ಲ. ಹಾಗಾಗಿ ಸಿಬ್ಬಂದಿಗೆ ಬಹಳಷ್ಟು ತೊಂದರೆಯಾಗುವುದು ಗಮನಕ್ಕೆ ಬಂದ ಕಾರಣ ಈ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಕಮಿಷನರೇಟ್ ಕಚೇರಿ ಆವರಣದಲ್ಲಿ ಕ್ಯಾಂಟೀನ್ ತೆರೆಯಲಾಗಿದೆ. ಬಿಸಿ ಹಾಗೂ ಶುಚಿಕರ, ಪೌಷ್ಠಿಕರ ಆಹಾರವನ್ನು ಆರಂಭಿಸಲಾಗಿದೆ. ರಾತ್ರಿ ಹೊತ್ತಿನಲ್ಲೂ ಈ ವ್ಯವಸ್ಥೆ ಅಗತ್ಯ ಬಿದ್ದಲ್ಲಿ, ಕ್ರಮ ವಹಿಸಲಾಗಿದೆ. ಹೋಂಗಾರ್ಡ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಕೆಲವರು ಸ್ವಯಂ ಇಚ್ಛೆಯಿಂದ ಅಡುಗೆ ತಯಾರಿಸಲು ಮುಂದಾಗಿದ್ದಾರೆ. ಇದು ಎಷ್ಟು ದಿನ ಮುಂದುವರಿಸಲು ಸಾಧ್ಯ ಅಲ್ಲಿಯವರೆಗೆ ನಡೆಸಲಾಗುವುದು. ಸದ್ಯ ನಾವೇ ವೆಚ್ಚವನ್ನು ಭರಿಸಿಕೊಂಡು ಈ ಕಾರ್ಯವನ್ನು ಆರಂಭಿಸಿದ್ದೇವೆ” ಎಂದು ಪೊಲೀಸ್ ಆಯಕ್ತರು ತಿಳಿಸಿದರು. ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.