ಪೊಲೀಸ್ ವಾಹನ ಮತ್ತು ಕಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ: ವಾಹನ ಸವಾರ ಸಾವು

ಕೆ.ಆರ್.ಪೇಟೆ: ನ.15:- ಬಸ್ಸಿನ ಬ್ರೇಕ್ ವಿಫಲವಾಗಿ ಕುರುಬ ಸಮುದಾಯದ ಮೆರವಣಿಗೆಯಲ್ಲಿ ಹೊರಟಿದ್ದ ದ್ವಿಚಕ್ರ ವಾಹನ ಹಾಗೂ ಹೈವೇ ಪೆಟ್ರೋಲ್ ಪೊಲೀಸ್ ವಾಹನ ಮತ್ತು ಕಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರನೊಬ್ಬ ಸಾವನ್ನಪ್ಪಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.
ಶ್ರೀಕ್ಷೇತ್ರ ಮರಡಿಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಗ್ರ ಅಭಿವೃದ್ದಿ ಕಾಮಗಾರಿ ಭೂಮಿಪೂಜೆ ಹಾಗೂ ಪಟ್ಟಣದಲ್ಲಿ ಕನಕಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದ ನಿಮಿತ್ತ ತಾಲೂಕು ಕುರುಬ ಸಮುದಾಯದ ವತಿಯಿಂದ ಪಟ್ಟಣದಲ್ಲಿಂದು ಬೃಹತ್ ಬೈಕ್ ರ್ಯಾಲಿ ಮತ್ತು ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆ ಸಾಗುತ್ತಿದ್ದ ವೇಳೆ ಪಟ್ಟಣದ ಟಿಬಿ ಸರ್ಕಲ್‍ನಲ್ಲಿ ಈ ಘಟನೆ ನಡೆದಿದೆ. ನಂಜನಗೂಡು ವಿಭಾಗದ ಕೆಎ10 ಎಫ್-362 ಕೆಎಸ್‍ಆರ್‍ಟಿಸಿ ಬಸ್ಸು ಚನ್ನರಾಯಪಟ್ಟಣದ ಕಡೆಯಿಂದ ಮೈಸೂರಿನ ಕಡೆಗೆ ತೆರಳುವ ಸಂದರ್ಭದಲ್ಲಿ ಪೊಲೀಸ್ ವಾಹನ ಮತ್ತು ಒಂದು ಕಾರಿಗೆ ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ವಾಹನ ಸವಾರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸೋಮನಹಳ್ಳಿ ಸಮೀಪದ ಪುರ ಗ್ರಾಮದ ಲೋಕೇಶ್(26) ಎಂಬುವವರು ಮರಣ ಹೊಂದಿದ್ದಾರೆ. ರಮೇಶ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬಸ್ಸಿನ ಬ್ರೇಕ್ ವಿಫಲವಾಗಿರುವುದೇ ಈ ಅಫಘಾತ ಸಂಭವಿಸಲು ಕಾರಣ ಎನ್ನಲಾಗಿದೆ. ಬ್ರೇಕ್ ಸರಿಪಡಿಸಿಕೊಳ್ಳಲು ಚಾಲಕ ಚನ್ನರಾಯಪಟ್ಟಣದ ಡಿಪೋಗೆ ಹೋಗಿದ್ದು ಅಲ್ಲಿನ ಮೆಕಾನಿಕ್ ಸಿಬ್ಬಂದಿಗಳು ಎರಡು ಮತ್ತು ಮೂರನೇ ಗೇರಿನಲ್ಲಿ ಹೋಗಬಹುದು ನಿಧಾನವಾಗಿ ಹೋಗಿ ಎಂದು ಹೇಳಿ ಕಳುಹಿಸಿದ್ದಾರೆ. ಅಸಮಾಧಾನದಿಂದಲೇ ನಿಧಾನವಾಗಿಯೇ ಕೆ.ಆರ್.ಪೇಟೆ ತಲುಪುತ್ತಿದ್ದ ಬಸ್ ಚಾಲಕ ಟಿಬಿ ಸರ್ಕಲ್ ಬಳಿ ಮೆರವಣಿಗೆ ಬರುತ್ತಿದುದನ್ನು ನೋಡಿ ಬಸ್ ನಿಯಂತ್ರಿಸಲು ಹರಸಾಹಸ ಮಾಡಿದ್ದು ಸಾಧ್ಯವಾಗದೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೆರವಣಿಗೆಗೆ ಹೊರಟಿದ್ದ ನಾಗರೀಕನ ಜೀವಕ್ಕೆ ಈ ಸರ್ಕಾರದಲ್ಲಿ ಬೆಲೆಯಿಲ್ಲದಂತಾಗಿದೆ. ಸಚಿವರೂ ಕೂಡ ಗಾಯಾಳು ಬಗ್ಗೆ ಯಾವುದೇ ಕ್ರಮವಹಿಸದೇ ಸಭೆಗೆ ತೆರಳಿದ್ದು ಅಪಘಾತವಾಗಿದ್ದರೂ ಇವರಿಗೆ ಸಭೆ ಸಮಾರಂಭವೇ ಮುಖ್ಯವಾಗಿದ್ದು. ಗಾಯಾಳುಗಳ ಯೋಗಕ್ಷೇಮ ವಿಚಾರಿಸದೇ ಸಭೆಗೆ ತೆರಳಿ ಸಾರ್ವಜನಿಕರ ಜೀವಕ್ಕೆ ಬೆಲೆಯಿಲ್ಲದಂತೆ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಗಾಯಾಳುಗಳ ಬಗ್ಗೆ ಯಾವುದೇ ಕ್ರಮ ವಹಿಸಿದ ಸಚಿವ ಕೆ.ಸಿ.ನಾರಾಯಣಗೌಡರ ನಡೆಯನ್ನು ಖಂಡಿಸಿದ್ದಾರೆ. ಕುಂಬಮೇಳದಲ್ಲಿ ಇಬ್ಬರು, ಹೊಸಹೊಳಲು ಕೆರೆ ಅಭಿವೃದ್ದಿಯಲ್ಲಿ ಒಬ್ಬರು, ಇಂದಿನ ಸಮಾವೇಶದಲ್ಲಿ ಒಬ್ಬರು ಸಚಿವರ ನೇತೃತ್ವದ ಸರ್ಕಾರಿ ಕಾರ್ಯಗಳಲ್ಲಿ ಬಲಿಯಾಗಿದ್ದು ಮತ್ತೊಬ್ಬರು ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ. ಆಯೋಜಕರು ಮತ್ತು ಅಧಿಕಾರಿಗಳ ಕರ್ತವ್ಯ ಲೋಪದಿಂದ ಸಚಿವರ ಕಾರ್ಯಕ್ರಮಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆಂದು ಹೆಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.