ಪೊಲೀಸ್ ಮನೆಗೆ ಕನ್ನ ಕುಖ್ಯಾತ ಕಳ್ಳನ ಸೆರೆ

ಬೆಂಗಳೂರು,ಡಿ.೩-ಬೀಗದ ಹಾಕಿದ ಮನೆಗಳನ್ನೇ ಗುರುತಿಸಿ ಹಾಡಹಗಲೇ ಏಕಾಂಗಿಯಾಗಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ ೨೩ ಲಕ್ಷ ಮೌಲ್ಯದ ೫೨೩ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಮತ್ತೆ ಕೈಚಳಕ ತೋರಿಸುತ್ತಿದ್ದ ಖ್ವಾಜಾ ಮೊಯಿದ್ದೀನ್ ಬಂಧಿತ ಕುಖ್ಯಾತ ಕಳ್ಳನಾಗಿದ್ದಾನೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಕಳೆದ.೨೭ರಂದು ಆನಂದ್ ರಾವ್ ಸರ್ಕಲ್ ಬಳಿಯಿರುವ ಪೊಲೀಸ್ ಕ್ವಾರ್ಟರ್ಸ್ ಮುಖ್ಯಪೇದೆಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಶೇಷಾದ್ರಿಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಸ್ ರವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದೆ.
ಈತನ ವಿರುದ್ಧ ಮಹದೇವಪುರ, ಜ್ಞಾನಭಾರತಿ, ಕೆ.ಎಸ್.ಲೇಔಟ್, ವೈಯ್ಯಾಲಿಕಾವಲ್ ಸೇರಿದಂತೆ ೧೦ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು.
ಸುಲಭವಾಗಿ ಹಣ ಸಂಪಾದಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ಕಳ್ಳತನಕ್ಕಿಳಿದಿದ್ದ. ಬೀಗ ಹಾಕಿದ್ದ ಮನೆಯನ್ನೇ ಗುರಿಯಾಗಿಸಿಕೊಂಡು ಏಕಾಂಗಿಯಾಗಿ ಮನೆಗಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಶಿವಾಜಿನಗರ, ಚನ್ನಪಟ್ಟಣ ಹಾಗೂ ಗೋವಾದಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಮೋಜು – ಮಸ್ತಿ ಮಾಡುವುದು ತನಿಖೆಯಲ್ಲಿ ಪತ್ತೆಯಾಗಿದೆ.