ಪೊಲೀಸ್ ಭದ್ರತೆ, ದಲಿತರಿಂದ ದೇವಾಲಯ ಪ್ರವೇಶ

ಚೆನ್ನೈ, ಜ.೪- ಬರೋಬ್ಬರಿ ೨೦೦ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ದೇವಾಲಯವೊಂದಕ್ಕೆ ದಲಿತ ಸಮುದಾಯದ ಜನರು ಪ್ರವೇಶಿಸಿದ್ದು, ಅವರ ಭದ್ರತೆಗಾಗಿ ೪೦೦ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.
ಎರಡು ದಶಕಗಳಿಂದ ಈ ದೇಗುಲಕ್ಕೆ ದಲಿತ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ೨೦೦೮ ರಲ್ಲಿ ನಡೆದ ವಿವಾದದಿಂದಾಗಿ ದೇಗುಲದ ಹಬ್ಬಗಳಲ್ಲಿಯೂ ಭಾಗಿಯಾಗದಂತೆ ನಿರ್ಬಂಧ ವಿಧಿಸಲಾಗಿತ್ತು.
ಇಷ್ಟು ವರ್ಷ ಈ ಉತ್ಸವ ದೇಗುಲದ ಆವರಣದ ಹೊರಗೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ವೈಕುಂಠ ಏಕಾದಶಿ ಪ್ರಯುಕ್ತ ಎಡುಥೈವನಾಥಂ ಗ್ರಾಮದ ದಲಿತ ಭಕ್ತಾದಿಗಳು ದೇವರಿಗೆ ಕಾಣಿಕೆ ಸಮರ್ಪಿಸಲು ವರದರಾಜ ಪೆರುಮಾಳ್ ದೇವಾಲಯಕ್ಕೆ ಮೆರವಣಿಗೆ ನಡೆಸಿದ್ದಾರೆ.
ಹಣ್ಣು, ರೇಷ್ಮೆವಸ್ತ್ರ, ಮಾಲೆಗಳನ್ನು ಕೊಂಡೊಯ್ಯುತ್ತಿದ್ದ ಮೆರವಣಿಗೆಯಲ್ಲಿ ೩೦೦ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಭಕ್ತರು ಭಾಗಿಯಾಗಿದ್ದರು.
ದೇವಾಲಯ ಖಾಸಗಿ ಒಡೆತನದಲ್ಲಿದೆ ಎಂದುಕೊಂಡಿದ್ದ ಹಿನ್ನೆಲೆ ಈವರೆಗೆ ಯಾವುದೇ ದಲಿತರು ಈ ವಿಚಾರ ಸಂಬಂಧಿಸಿದಂತೆ ಧ್ವನಿ ಎತ್ತಿರಲಿಲ್ಲ. ಆದರೆ, ದೇಗುಲ ತಮಿಳುನಾಡು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು ಎಂದು ತಿಳಿದ ಬಳಿಕ, ಅಸ್ಪೃಶ್ಯತೆ, ಅಸಮಾನತೆಯನ್ನು ತೊಡೆದುಹಾಕಲು ನಿರ್ಧರಿಸಿ ಗ್ರಾಮದ ಎಲ್ಲ ದಲಿತ ಭಕ್ತಾದಿಗಳು ದೇಗುಲ ಪ್ರವೇಶಿಸಲು ನಿರ್ಧರಿಸಿದ್ದರು.