ಪೊಲೀಸ್ ಪರೀಕ್ಷೆಯಲ್ಲಿ ವಂಚನೆ: ಮತ್ತೆ ನಾಲ್ಕು ಮಂದಿ ಬಂಧನ

ಉಡುಪಿ, ಆ.೨೦- ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ವಂಚನೆ ಎಸಗಿರುವ ಆರೋಪದಡಿ ನಾಲ್ವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬೆಳಗಾಂನ ಗೋಕಾಕ್‌ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳಗಾಂ ಜಿಲ್ಲೆಯ ಗೋಕಾಕ್ ತಾಲೂಕಿನ ಹನುಮಂತ ಮೇಸ್ತ್ರಿ ಅಯ್ಯಪ್ಪ (೩೦), ಮೂಡಲಗಿ ತಾಲೂಕಿನ ಅಪ್ಪಯ್ಯ ನಾಯಿಕ್(೨೯), ಇಸ್ಮಾಯಿಲ್ ನದಾಫ (೨೪), ಹೊಳೆಪ್ಪ ಮುತ್ಯಪ್ಪಭಾಗೆವಾಡಿ(೨೮) ಎಂದು ಗುರುತಿಸಲಾಗಿದೆ. ೨೦೨೦ರ ಅ.೧೮ರಂದು ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಜಾರಿ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಬೆಳಗಾವಿಯ ರಾಯಭಾಗ್‌ನ ಪ್ರವೀಣ್ ಖೋತ್ ಎಂಬಾತನ ಬದಲಿಗೆ ಇನ್ನೊಬ್ಬ ವ್ಯಕ್ತಿಯು ಲಿಖಿತ ಪರೀಕ್ಷೆ ಬರೆದಿದ್ದನು. ಆ ಬಳಿಕ ೨೦೨೦ರ ಡಿ.೧೯ರಂದು ಧಾರವಾಡದಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಮತ್ತು ಜ.೧ರಂದು ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರವೀಣ್ ಖೋಟ್ ಹಾಜರಾಗಿ ವಂಚನೆ ಎಸಗಿದ್ದನು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಪ್ರವೀಣ್ ಖೋತ್‌ನನ್ನು ಬಂಧಿಸಿದ್ದರು. ಬಳಿಕ ಆತ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದನು. ನಂತರ ಈತನಿಂದ ಪ್ರಕರಣ ಮಾಹಿತಿಯನ್ನು ಪಡೆದ ಮಲ್ಪೆ ಎಸ್ಸೈ ಸಕ್ತಿವೇಲು ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತರಲ್ಲಿ ಹನಮಂತ, ಅಪ್ಪಯ್ಯ ನಾಯಿಕ್, ಹೊಳೆಪ್ಪ ಮಧ್ಯವರ್ತಿಗಳಾಗಿದ್ದು, ಇಸ್ಮಾಯಿಲ್ ನಕಲಿ ಅಭ್ಯರ್ಥಿ ಯಾಗಿ ಪರೀಕ್ಷೆ ಬರೆದಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.