ಪೊಲೀಸ್ ಧ್ವಜಾ ದಿನಾಚರಣೆ : ಪೊಲೀಸರ ಕಾರ್ಯ ಶ್ಲಾಘನೀಯ -ಎಸ್.ಬಿ.ಪಾಟೀಲ್

ರಾಯಚೂರು.ಏ.೦೨- ಕೊರೊನಾ ಸಂದರ್ಭದಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಕೊರೊನಾ ವಿರುದ್ಧ ಹೋರಾಡಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇವರ ಕಾರ್ಯ ಶ್ಲಾಘನೀಯವಾಗಿದೆಂದು ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಬಿ.ಪಾಟೀಲ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜಾ ದಿನಾಚರಣೆಯ
ಅಂಗವಾಗಿ ಧ್ವಜರೊಹಣ ನೆರವೆರಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಕಾರ್ಯ ನಿರ್ವಹಿಸಿದರು. ಆದರೂ, ಕೊರೊನಾ ಮಹಾಮಾರಿಗೆ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ನಾಲ್ಕರಿಂದ ಐದು ಜನ ಬಲಿಯಾದರೂ, ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ಕೊರೊನಾ ವಿರುದ್ಧ ವಾರಿಯರ್ಸ್ ಆಗಿ ಹೋರಾಡಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕೊರೊನಾವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶ್ಲಾಘನೀಯವಾಗಿದೆ.
ಮತ್ತೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಪೊಲೀಸರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕಾರ್ಯ ನಿರ್ವಹಿಸಿ, ನಿವೃತ್ತರಾದ ನಂತರ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಯಾವುದೇ ಕೆಲಸದಲ್ಲಿ ತೆಗೆದುಕೊಳ್ಳುವುದಿಲ್ಲ. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಿವೃತ್ತ ಪೊಲೀಸ್ ಸಂಘಕ್ಕೆ ನಗರದಲ್ಲಿ ಕೊಠಡಿ ವ್ಯವಸ್ಥೆಯನ್ನು ನೀಡಿಲಾಗಿದೆ. ಪೊಲೀಸರು ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ನಂತರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಮಾತನಾಡುತ್ತಾ, ಬಾಲ್ಯದಿಂದ ನನಗೆ ಪೊಲೀಸ್ ಇಲಾಖೆಯೂ ಹತ್ತಿರವಿದ್ದು, ಪೊಲೀಸ್ ಇಲಾಖೆಯಲ್ಲಿ ಸಂಬಂಧಿಸಿದಂತಹ ಕ್ರೀಡೆಗಳಲ್ಲಿ ನಾನು ಭಾಗವಹಿಸಿದ್ದೇನೆ. ಪೊಲೀಸರು ಹೆಚ್ಚಿನ ಸಮಯವನ್ನು ಕರ್ತವ್ಯದಲ್ಲಿಯೇ ಕಳೆಯುತ್ತಾರೆ. ನೀವು ಕುಟುಂಬದವರ ಜೊತೆ ಮತ್ತು ಕರ್ತವ್ಯದಲ್ಲಿ ಸಮಯವನ್ನು ಕಳೆಯಿರಿ. ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿ. ಅವರ ಸ್ನೇಹಿತರ ಕಡೆ ಸ್ವಲ್ಪ ಗಮನ ಹರಿಸಿ, ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ, ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಮಕ್ಕಳನ್ನು ಒಳ್ಳೆಯ ಅಧಿಕಾರಿಯನ್ನಾಗಿ ಮಾಡಿಯೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಂ ಪ್ರಕಾಶ ಅಮೃತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಡಿವೈಎಸ್‌ಪಿ ಶಿವನಗೌಡ ಪಾಟೀಲ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.