ಪೊಲೀಸ್ ಠಾಣೆ ಆರಂಭಕ್ಕೆ ಒತ್ತಾಯ

ಕೋಲಾರ,ಏ.೨೦: ನರಸಾಪುರದಲ್ಲಿ ಹೊಸದಾಗಿ ಪೊಲೀಸ್ ಠಾಣೆಯನ್ನು ತೆರೆಯಲು ಒತ್ತಾಯಿಸಿ ಜಿಲ್ಲಾ ಸಹಾಯಕ ರಕ್ಷಣಾಧಿಕಾರಿ ಬಿ.ಎಂ.ನಾರಾಯಣಸ್ವಾಮಿಯವರಿಗೆ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದವರು ಮನವಿ ಮಾಡಿದರು.
ಕೋಲಾರ ತಾಲ್ಲೂಕು ನರಸಾಪುರ, ವೇಮಗಲ್ ಕೈಗಾರಿಕಾ ಪ್ರದೇಶಗಳಾಗಿದ್ದು, ಇಲ್ಲಿ ಅತಿಹೆಚ್ಚು ಬೇರೆ ರಾಜ್ಯದವರು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ನೆಲೆಸಿದ್ದು, ಸದರಿ ಕೈಗಾರಿಕಾ ಪ್ರದೇಶಕ್ಕೆ ವೇಮಗಲ್ ಒಂದೇ ಠಾಣೆಯಿದ್ದು, ಒಬ್ಬರು ಆರಕ್ಷಕ ಉಪನಿರೀಕ್ಷಕರಿದ್ದು, ಸಿಬ್ಬಂದಿ ಕೊರತೆಯು ಇರುತ್ತದೆ. ಈ ವೇಮಗಲ್ ಠಾಣೆಗೆ ೧೦೦ ಕ್ಕೂ ಹೆಚ್ಚು ಹಳ್ಳಿಗಳು ಸೇರಿದ್ದು, ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಜೂಜು, ಗ್ಯಾಂಬಲಿಂಗ್ ಅತಿ ಹೆಚ್ಚಾಗಿ ನಡೆಯುತ್ತಿದ್ದು, ರಾತ್ರಿ ಪಾಳ್ಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸ ಮುಗಿಸಿಕೊಂಡು ಹಿಂತಿರುಗುವ ಸಮಯದಲ್ಲಿ ಅದೆಷ್ಟೋ ಕಳ್ಳತನಗಳು, ಕೊಲೆ ಪ್ರಯತ್ನಗಳು ನಡೆದಿವೆ. ಭಾನುವಾರದ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡುವಂತಹದ್ದು, ಬೇರೆ ವಾಹನ ಸವಾರರಿಗೆ ಪ್ರಾಣಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದರು. ಈ ಪ್ರದೇಶದಲ್ಲಿ ಭೂಮಿಯ ಬೆಲೆ ಹೆಚ್ಚಾಗುತ್ತಿದ್ದು, ಲಿಯಲ್ ಎಸ್ಟೇಟ್ ನೆಪದಲ್ಲಿ ಬೆಂಗಳೂರಿನ ಭೂಗತ ಲೋಕದ ಮಾಫಿಗಳು ಕೋಲಾರಕ್ಕೆ ಕಾಲಿಟ್ಟಿದ್ದಾರೆ.
ಈ ಹಿಂದೆಯೇ ಇಲಾಖೆಗೆ ನಮ್ಮ ಸಂಘಟನೆಯಿಂದ ಮನವಿ ಮಾಡಿಕೊಂಡಿರುತ್ತೇವೆ. ಆದರೂ ಯಾವುದೇ ಪ್ರಯೋಜನವಾಗಿವುದಿಲ್ಲ ಎಂದು ತಿಳಿಸಿದರು. ಆದ್ದರಿಂದ ಕೂಡಲೇ ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣವಾಗಬೇಕು. ಈಗ ತಾವಾದರೂ ಇದರ ಬಗ್ಗೆ ಗಮನ ಹರಿಸಿ ಕೂಡಲೇ ನರಸಾಪುರದಲ್ಲಿ ಒಂದು ಪೊಲೀಸ್ ಠಾಣೆಯನ್ನು ತೆರೆದು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿದಲ್ಲಿ ಜನ ಸಮಾನ್ಯರಿಗೆ ಮತ್ತು ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಉಪಾಧ್ಯಕ್ಷ ನಂದಕುಮಾರ್, ಜಿಲ್ಲಾ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಮುಳಬಾಗಿಲು ತಾಲ್ಲುಕು ಅಧ್ಯಕ್ಷ ಎಲ್.ಎನ್.ಬಾಬು, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡ ಕುರುಬರಹಳ್ಳಿ ಶಂಕರಪ್ಪ, ಕೋಲಾರ ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ವೇಣು ಉಪಸ್ಥಿತರಿದ್ದರು