ಪೊಲೀಸ್ ಕ್ರೀಡಾಕೂಟ
 ಸಮಬಲ ಸಾಧಿಸಿದ ಪೊಲೀಸ್ -ಪತ್ರಕರ್ತರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.13: ಪ್ರಸಕ್ತ ವರ್ಷದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಿನ್ನೆ ಡಿಎಆರ್ ಗ್ರೌಂಡ್ ನಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹಾಗು  ಪತ್ರಕರ್ತರ ನಡುವಿನ   ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು  ಸಮಬಲ ಸಾಧಿಸಿವೆ.
ಎರಡು ಪಂದ್ಯಗಳು ಅತ್ಯಂತ ರೋಚಕತೆಯಿಂದ ಕೂಡಿ  ಕೊನೆಯ ಓವರ್‌ನಲ್ಲಿ ಗೆಲುವು ನಿರ್ಣಯಗೊಂಡವು.
 ಪೊಲೀಸ್ ತಂಡಕ್ಕೆ ಗೆಲುವು:
ಮೊದಲಿಗೆ ನಡೆದ  ಪಂದ್ಯದಲ್ಲಿ ಪತ್ರಕರ್ತರ ತಂಡ ೧೦ ಓವರ್‌ಗಳಲ್ಲಿ  ವಿಕೆಟ್ ನಷ್ಟವಿಲ್ಲದೆ ೧೦೦ ರನ್‌ ಕಲೆಹಾಕಿತ್ತು.  ವೀರೇಶ್ ೫೧, ವೆಂಕೋಬಿ ಸಂಗನಕಲ್ಲು ೩೭ ರನ್ ಗಳಿಸಿದರು.
ಎಎಸ್ಪಿ ಅವರ ತಂಡ ೧೦೧ ರನ್‌ಗಳ ಬೆನ್ನತ್ತಿ ಮೊದಲ ಓವರ್‌ನಲ್ಲೇ ಒಂದು ವಿಕೆಟ್ ಕಳೆದುಕೊಂಡಿತು. ಆದರೆ  ನಂತರ ಬಂದ ಗ್ರಾಮೀಣ ಸಿಪಿಐ ನಿರಂಜನ್, ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ, ತೋರಣಗಲ್ಲು ಪಿಎಸ್‌ಐ ಕಾಳಿಂಗ ಅವರು ಉತ್ತಮ ಪ್ರದರ್ಶನ ತೋರಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಕೊನೆಯ ಓವರ್‌ನಲ್ಲಿ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಏಳು ವಿಕೇಟ್ ಕಳೆದುಕೊಂಡಿದ್ದ ಪೊಲೀಸರ ತಂಡಕ್ಕೆ ೨ ಎಸೆತದಲ್ಲಿ ೩ ರನ್ ಬೇಕಾದಾಗ ಪತ್ರಕರ್ತರ ತಂಡದ ಮಿಸ್ ಫೀಲ್ಡಿಂಗ್‌ನಿಂದ ಗೆಲುವಿಗಾಗಿ ಶ್ರಮಿಸುತ್ತಿದ್ದ ಪೊಲೀಸರ ತಂಡಕ್ಕೆ ಜಯ ಸುಲಭವಾಯ್ತು.
 ಪತ್ರಕರ್ತರ ತಂಡಕ್ಕೆ ಗೆಲುವು:
ಎರಡನೇ ಪಂದ್ಯ ಎಸ್‌ಪಿ ಮತ್ತು ಪತ್ರಕರ್ತರ ತಂಡದ ನಡುವೆ ನಡೆಯಿತು.
ಈ ಪಂದ್ಯದಲ್ಲೂ ಟಾಸ್‌ಗೆದ್ದ ಪತ್ರಕರ್ತರ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕವಾಗಿ ಕಣಕ್ಕಿಳಿದ ವೀರೇಶ್ ಮತ್ತು ಬಸವರಾಜ ಹರನಹಳ್ಳಿ ಉತ್ತಮ ರನ್ ಕಲೆ ಹಾಕುವ ಮೂಲಕ  ತಂಡಕ್ಕೆ ಉತ್ತಮ ಆರಂಭ ಒದಗಿಸಿದರು, ಬಸವರಾಜ್ ಅವರ ಮೊದಲ ವಿಕೆಟ್  ನಂತರ ಬಂದ ವೆಂಕೋಬಿ ಸಂಗನಕಲ್ಲು, ವೀರೇಶ್ ಅವರಿಗೆ ಉತ್ತಮ ಜೊತೆಯಾದರು. ಪ್ರತಿ ಚೆಂಡನ್ನೂ ಬೌಂಡರಿಗಟ್ಟುತ್ತಾ ಅಬ್ಬರದ ಆಟ ಪ್ರದರ್ಶಿಸಿದ ವೀರೇಶ್  ಅಜೇಯರಾಗಿ ಶತಕ (೧೦೧) ಬಾರಿಸಿದರು. ಪತ್ರಕರ್ತರ ತಂಡ ೧೦ ಓವರ್‌ಗಳಲ್ಲಿ ೧೪೩ ರನ್ ಕಲೆಹಾಕಿ ಎಸ್‌ಪಿ ತಂಡಕ್ಕೆ ೧೪೪ ರನ್‌ಗಳ ಗುರಿಯನ್ನು ನೀಡಿತು.
ಆರಂಭಿಕವಾಗಿ ಎಸ್‌ಪಿ ತಂಡದಿಂದ ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ತೋರಣಗಲ್ಲು ಪಿಎಸ್‌ಐ ಕಾಳಿಂಗ ಕಣಕ್ಕಿಳಿದರು. ಮೊದಲ ಓವರ್‌ನಲ್ಲೇ ಎಸ್‌ಪಿ ಅವರು ಔಟಾದರು. ನಂತರ ಕಣಕ್ಕಿಳಿದ ಮೋಕಾ ಪಿಎಸ್‌ಐ ಶಶಿಧರ್ ಮತ್ತು ಕಾಳಿಂಗ ಅವರು ಉತ್ತಮ ರನ್ ಕಲೆಹಾಕಿದರು.
ಕಾಳಿಂಗ ಅವರು  ಪ್ರತಿ ಚೆಂಡನ್ನು ಬೌಂಡರಿಗಟ್ಟುವ ಭರದಲ್ಲಿ ೯ನೇ ಓವರ್‌ನಲ್ಲಿ ಕ್ಯಾಚಿತ್ತು 75 ರನ್ ಗಳಿಸಿ ಔಟಾದರು.
ಕೊನೆಯ ಓವರ್‌ನಲ್ಲಿ ಗೆಲುವಿಗಾಗಿ ಎಸ್ಪಿ ತಂಡಕ್ಕೆ  ೬ ಎಸೆತಗಳಲ್ಲಿ ೨೦ ರನ್ ಬೇಕಾಗಿತ್ತು,  ಬಸವರಾಜ ಹರನಹಳ್ಳಿ ಎಸೆತಕ್ಕೆ  ಎಸ್ಪಿ ತಂಡಕ್ಕೆ ೨ ಸಿಕ್ಸರ್ ಬಂದರ್  ಗೆಲುವು ಸಾಧ್ಯವಾಗಲಿಲ್ಲ. ೬ ರನ್‌ಗಳಿಂದ ಪತ್ರಕರ್ತರ ತಂಡ ಗೆಲುವು ಸಾಧಿಸಿತು.
 ಪಂದ್ಯ ಮುಗಿದ ಬಳಿಕ ಮಾತನಾಡಿದ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಅವರು, ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯ ಗೆಲ್ಲುವ ಮೂಲಕ ಸಮಬಲ ಸಾಧಿಸಿದೆ.  ಪೊಲೀಸರು ಮತ್ತು ಪತ್ರಕರ್ತರ ನಡುವಿನ ಈ ಸೌಹಾರ್ದತೆ ಮುಂದೆಯೂ ಹೀಗೆ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಉತ್ತಮ ಪ್ರದರ್ಶನ ತೋರಿದ ವೀರೇಶ್ ಮತ್ತು  ಕಾಳಿಂಗ ಅವರಿಗೆ ತಲಾ ೨೫೦೦ ರೂ. ನಗದು ಬಹುಮಾನ ಘೋಷಿಸಿದರು.