ಪೊಲೀಸ್ ಕಾನ್ಸ್ ಟೇಬಲ್ ಪುತ್ರಿಗೆ ನೆರವು

ಹೊನ್ನಾಳಿ.ಜೂ.೧೧; ಕೊರೊನಾ ಕಾಲಘಟ್ಟದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಯವರೆಗೆ ಎಲ್ಲರೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕುಟುಂಬದ ಎಲ್ಲಾ ಅರ್ಹ ಸದಸ್ಯರಿಗೂ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು ಎಂದು “ಸಮಾಜಕ್ಕಾಗಿ ನಾವು” ಸೇವಾ ಟ್ರಸ್ಟ್ನ ಕಾರ್ಯದರ್ಶಿ ಕೋರಿ ಯೋಗೀಶ್ ಕುಳಗಟ್ಟೆ ಸರಕಾರವನ್ನು ಒತ್ತಾಯಿಸಿದರು.ಇತ್ತೀಚೆಗೆ ಕೊರೊನಾ ರೋಗದಿಂದ ನಿಧನರಾದ ಪೊಲೀಸ್ ಪೇದೆ ಎಚ್.ಎನ್. ಚಂದ್ರಕಲಾ ಅವರ ಸ್ಮರಣಾರ್ಥ ಪಟ್ಟಣದ ಪೊಲೀಸ್ ಠಾಣೆ ವಸತಿ ಗೃಹದಲ್ಲಿ  ಹಮ್ಮಿಕೊಂಡ ಸಂಸ್ಮರಣೆ ಸಮಾರಂಭದಲ್ಲಿ ಅವರ ಪುತ್ರಿ ಖುಷಿ ವಿದ್ಯಾಭ್ಯಾಸಕ್ಕೆ “ಸಮಾಜಕ್ಕಾಗಿ ನಾವು” ಸೇವಾ ಟ್ರಸ್ಟ್ನ ವತಿಯಿಂದ ಐದು ಸಾವಿರ ರೂ.ಗಳ ಧನಸಹಾಯ ವಿತರಿಸಿ ಅವರು ಮಾತನಾಡಿದರು.ಕೊರೊನಾ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳ ಕೊರೊನಾ ಯೋಧರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವ ಮೂಲಕ ಅಮೂಲ್ಯ ಜೀವಗಳ ರಕ್ಷಣೆಗೆ ಸರಕಾರ ಕಟಿಬದ್ಧವಾಗಬೇಕು ಎಂದು ವಿನಂತಿಸಿದರು. ಕೊರೊನಾ ರೋಗದಿಂದ ನಿಧನರಾದ ಪೊಲೀಸ್ ಪೇದೆ ಎಚ್.ಎನ್. ಚಂದ್ರಕಲಾ ಗರ್ಭಿಣಿಯಾಗಿದ್ದರು. ಈಗಾಗಲೇ ಅವರಿಗೆ ಖುಷಿ ಎಂಬ ಹೆಸರಿನ ಒಂದೂವರೆ ವರ್ಷದ ಹೆಣ್ಣು ಮಗು ಇದೆ. ತಮ್ಮ ಮಗಳನ್ನು ವೈದ್ಯೆಯನ್ನಾಗಿ ಮಾಡಬೇಕು ಎಂಬುದು ಪೇದೆ ಎಚ್.ಎನ್. ಚಂದ್ರಕಲಾ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅವರ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ದೊರೆಯುತ್ತದೆ. ಆದರೆ, ಕೊರೊನಾ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಲೇ ಸೋಂಕಿಗೆ ಬಲಿಯಾಗಿರುವ ಪೇದೆ ಎಚ್.ಎನ್. ಚಂದ್ರಕಲಾ ಅವರ ಮಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನಮ್ಮ ಸಮಾಜ ಆ ಕುಟುಂಬದ ಬೆನ್ನಿಗೆ ನಿಲ್ಲಬೇಕಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಉಳ್ಳವರು ಉದಾರ ಮನಸ್ಸಿನಿಂದ ಮಗುವಿನ ಭವಿಷ್ಯ ರೂಪಿಸಲು ನೆರವು ನೀಡಬೇಕಿದೆ ಎಂದು ವಿನಂತಿಸಿದರು.ಧನಸಹಾಯ ಮಾಡುವವರು ಭೋಜಪ್ಪ ಕಿಚಡಿ, ಉಳಿತಾಯ ಖಾತೆ ಅಕೌಂಟ್ ನಂಬರ್: 64088564061. ಐಎಫ್‌ಎಸ್ಸಿ ಕೋಡ್: ಎಸ್‌ಬಿಐಎನ್‌0040308. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೊನ್ನಾಳಿ ಶಾಖೆ. ಅಥವಾ ಫೋನ್ ಪೇ ನಂಬರ್: 7829455603ಗೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ವಿವರಗಳಿಗೆ 9980608609 ಮೂಲಕ ಸಂಪರ್ಕಿಸಬಹುದು.