ಪೊಲೀಸ್ ಕಮಿಷನರ್ ಗ್ರಾಮ ವಾಸ್ತವ್ಯಕ್ಕೆ ಭವ್ಯ ಸ್ವಾಗತ ಪಟ್ಟಣ ಜನರ ದೂರು ಆಲಿಸಿದ ಡಾ.ರವಿಕುಮಾರ

ಕಲಬುರಗಿ.ಸೆ.24:ಜನರ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರ ಸೂಚಿಸಲು ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ ಅವರು ಪಟ್ಟಣ ಗ್ರಾಮದಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿದರು. ಐಪಿಎಸ್ ಅಧಿಕಾರಿಯೊಬ್ಬರು ಹಳ್ಳಿಯಲ್ಲಿ ವ್ಯಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದಾರೆ. ಇದು ಅವರ ಎರಡನೇ ಗ್ರಾಮ ವಾಸ್ತವ್ಯವಾಗಿದೆ.
ಸಂಜೆ ಪಟ್ಟಣಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ರವಿಕುಮಾರ ಹಾಗೂ ಅವರೊಂದಿಗೆ ಆಗಮಿಸಿದ್ದ ಡಿಸಿಪಿ ಅಡ್ಡೂರು ಶ್ರೀನಿವಾಸಲು ಮತ್ತು ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್ ಭಾಸು ಚವ್ಹಾಣ ಅವರನ್ನು ಊರಿನ ಪ್ರವೇಶದಲ್ಲಿಯೇ ಜನರು ಸ್ವಾಗತಿಸಿ, ಡೊಳ್ಳು ಭಾಜಾ ಭಜಂತ್ರಿಗಳೊಂದಿಗೆ ಗ್ರಾಮದೊಳಗೆ ಕರೆದುಕೊಂಡರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲದೆ ಗ್ರಾಮ ದೇವತೆ ದೇವಾಲಯಕ್ಕೆ ಭೇಟಿ ದರ್ಶನ ಪಡೆದುಕೊಂಡರು. ನಂತರ ಪಟ್ಟಣ ಗ್ರಾಮದಲ್ಲಿ ಜನರೊಂದಿಗೆ ನಡೆದ ಸಂಪರ್ಕ ಸಭೆಯಲ್ಲಿ ಹಳ್ಳಿಗರ ದೂರು-ದುಮ್ಮಾನಗಳಿಗೆ ಕಿವಿಯಾದರು. ಅವರು ದೂರುಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡಿದರು. ಪೊಲೀಸ್ ಠಾಣೆಗಳಿಗೆ ಜನರು ನೀಡಿರುವ ದೂರುಗಳ ವಿವರ ಪಡೆದುಕೊಂಡು ಅವು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ದೂರುದಾರರಿಗೆ ಅಧಿಕಾರಿಗಳಿಂದ ಕೊಡಿಸಿದರು. ಅಲ್ಲದೆ ಜನರೊಂದಿಗೆ ಪೊಲೀಸ್ ವ್ಯವಸ್ಥೆ ಕುರಿತು ಚರ್ಚೆ ಸಲಹೆ ಪಡೆದುಕೊಂಡರು.
ಉತ್ತಮ ಪೊಲೀಸ್ ಆಡಳಿತ ಮೂಲಕ ನಿಮ್ಮ ನೋವುಗಳಿಗೆ ಸ್ಪಂದಿಸುತ್ತೇವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸರ್ಕಾರದ ಉದ್ದೇಶವಾಗಿದೆ. ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ಎಂದು ಡಾ.ರವಿಕುಮಾರ ಅವರು ತಿಳಿಸಿದರು.
ಈ ಹಿಂದೆ ತಾವು ಶ್ರೀನಿವಾಸರಡಗಿ ಗ್ರಾಮದಲ್ಲಿ ಪ್ರಥಮ ಗ್ರಾಮ ವಾಸ್ತವ್ಯ ಮಾಡಿದಾಗ ಜನರಿಂದ ಉತ್ತಮ ಪ್ರಕ್ರಿಯೆ ಬಂದಿದೆ. ಜನರ ಕೆಲವೊಂದು ದೂರುಗಳನ್ನು ಪರಿಹರಿಸಲಾಗಿದೆ. ಅದರಂತೆ ಪಟ್ಟಣ ಗ್ರಾಮದವರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ತಡರಾತ್ರಿಯವರೆಗೂ ಜನರೊಂದಿಗೆ ಸಮಾಲೋಚನೆ ನಡೆಸಿ ಭೋಜನ ಸ್ವೀಕರಿಸಿ ಹಾಸ್ಟೇಲ್‍ನಲ್ಲಿ ವಾಸ್ತವ್ಯ ಮಾಡಿದರು.