ಪೊಲೀಸ್ ಇಲಾಖೆಯಿಂದ ನಡೆದ ಪ್ರಾಪರ್ಟಿ ರಿಟನ್ರ್ಸ್ ಪೆರೇಡ್

ಚಾಮರಾಜನಗರ, ನ28- ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನದಿಂದ ವಶಪಡಿಸಿಕೊಳ್ಳಲಾಗಿದ್ದ 64 ಸ್ವತ್ತು ಕಳುವು ಪ್ರಕರಣಗಳಲ್ಲಿನ ಚಿನ್ನಾಭರಣ, ನಗದು, ಮೋಟಾರ್ ವಾಹನ, ಮೋಟಾರ್‍ಸೈಕಲ್, ಮೊಬೈಲ್‍ಸೆಟ್, ಇನ್ನಿತರೆ ವಸ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸುವ ಪ್ರಾಪರ್ಟಿ ರಿಟನ್ರ್ಸ್ ಪೆರೇಡ್ ಕಾರ್ಯಕ್ರಮ ನಗರದಲ್ಲಿಂದು ನಡೆಯಿತು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಇಲಾಖೆವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್ ಅವರು ವಸ್ತುಗಳನ್ನು ಕಳೆದುಕೊಂಡಿದ್ದವರಿಗೆ ಮರಳಿ ನೀಡುತ್ತಿದ್ದಂತೆ ವಾರಸುದಾರರ ಮುಖದಲ್ಲಿ ಮಂದಾಹಾಸ ಮೂಡುವಂತಾಯಿತು.
ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್, 2020ರಿಂದ ಹಾಗೂ 2021ರ ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 175 ಸ್ವತ್ತು ಕಳುವು ಪ್ರಕರಣಗಳಲ್ಲಿ 64 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣಗಳ ಒಟ್ಟು ಮೌಲ್ಯ 1 ಕೋಟಿ 46 ಲಕ್ಷದ 63 ಸಾವಿರದ 240 ರೂ. ಗಳಾಗಿದ್ದು, ಇದು ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅಪರಾಧ ಪತ್ತೆದಳದ ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು ಅವರು ಮಾತನಾಡಿ, ಪತ್ತೆಹಚ್ಚಲಾದ 64 ಪ್ರಕರಣಗಳಲ್ಲಿ 47 ಪ್ರಕರಣಗಳ ರೂ. 69 ಲಕ್ಷದ 88 ಸಾವಿರದ 555 ರೂ. ಮೌಲ್ಯದ ವಸ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅಪರಾಧ ಪತ್ತೆದಳ ಕಳುವು ಪ್ರಕರಣಗಳ ಪತ್ತೆಹಚ್ಚುವಿಕೆಯಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಆದರೂ ಸಹ ಕಳುವು ವಸ್ತುಗಳ ಸ್ವಾಧೀನ ಶೇ. 100ರಷ್ಟು ಸಾಧ್ಯವಾಗುವುದಿಲ್ಲ. ವಸ್ತುಗಳನ್ನು ಕಳೆದುಕೊಂಡ ವಾರಸುದಾರರಿಗೆ ಒಂದು ಸಣ್ಣ ಸಾಂತ್ವನ ನೀಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯದ್ದು ಪ್ರಮುಖ ಪಾತ್ರ. ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಪರಾಧ, ದರೋಡೆ, ಕಳ್ಳತನ ಪ್ರಕರಣಗಳನ್ನು ತಡೆಯುವ ಸಲುವಾಗಿ ಪೊಲೀಸ್ ಬೀಟ್‍ಗಳನ್ನು ಹೆಚ್ಚಿಸಲಾಗಿದೆ. ವಿವಿಧ ಕಳುವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಅಧಿಕಾರಿ, ಸಿಬ್ಬಂದಿಗೆ ಇಲಾಖೆಯಿಂದ ನೀಡಲಾಗುತ್ತಿರುವ ಪ್ರಮಾಣಪತ್ರ ಹಾಗೂ ನಗದು ಬಹುಮಾನ ಸಾರ್ವಜನಿಕರ ರಕ್ಷಣಾ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಸುಂದರರಾಜು ಅವರು ತಿಳಿಸಿದರು.
ಸ್ವತ್ತು ಕಳುವು ಪ್ರಕರಣಗಳನ್ನು ಬೇಧಿಸಿದ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು. ಡಿ.ವೈ.ಎಸ್.ಪಿ. ಪ್ರಿಯದರ್ಶಿನಿ ಸಾಣೆಕೊಪ್ಪ, ನಾಗರಾಜು, ಇತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.