ಪೊಲೀಸ್ ಆಯುಕ್ತರ ಜೊತೆ ಶಾಸಕ ವೇದವ್ಯಾಸ್ ಚರ್ಚೆ

ಮಂಗಳೂರು, ಎ.೨೧- ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಸಂಬಂಧಪಟ್ಟಂತೆ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಜೊತೆ ನಿನ್ನೆ ಸಭೆ ನಡೆಸಿದರು.

ವಾಹನ ನಿಲುಗಡೆ ನಿರ್ಬಂಧಿತ ಪ್ರದೇಶಗಳಿಂದ ವಾಹನ ಸವಾರರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡದೆ ಅಥವಾ ಯಾವುದೇ ಮಾಹಿತಿ ನೀಡದೆ ಟೋಯಿಂಗ್ ಮಾಡುತ್ತಿರುವುದು ಸರಿಯಲ್ಲ. ಸೂಚನೆ ನೀಡಿದ ಬಳಿಕವೇ ಟೋಯಿಂಗ್ ಮಾಡಬೇಕು. ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ವಾಹನ ನಿಲ್ಲಿಸಿ ಮೆಡಿಕಲ್ ಗೆ ತೆರಳಿ ಮರಳಿ ಬರುವಾಗ ವಾಹನಗಳನ್ನು ಟೋಯಿಂಗ್ ಮಾಡಿರುವ ಕುರಿತು ದೂರುಗಳಿವೆ. ವಾಹನಕ್ಕಾಗಿ ಪೊಲೀಸ್ ಠಾಣೆಗಳಿಗೆ ಅಲೆದಾಡಿದ ನಿದರ್ಶನಗಳಿವೆ. ಹಾಗಾಗಿ ಇವೆಲ್ಲವನ್ನೂ ಸರಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಬೇಕು ಎಂದು ಶಾಸಕ ಕಾಮತ್ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಂಗಳೂರು ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಲೀಲಾವತಿ ಪ್ರಕಾಶ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆಯ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪೂರ್ಣಿಮಾ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ರೂಪಾ. ಡಿ ಬಂಗೇರ ಉಪಸ್ಥಿತರಿದ್ದರು.