ಪೊಲೀಸ್ ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ

ಉಡುಪಿ, ಜ.೫- ಅಪರಿಚಿತ ವ್ಯಕ್ತಿಯೊಬ್ಬ ಜ.೩ ರಂದು ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ರಚಿಸಿ ಅವರ ಸ್ನೇಹಿತರಲ್ಲಿ ಹಣ ಕಳುಹಿಸುವಂತೆ ಸಂದೇಶ ರವಾನೆ ಮಾಡಲಾಗಿದೆ. ಈ ಬಗ್ಗೆ ತಿಳಿದ ವೃತ್ತ ನಿರೀಕ್ಷಕ ಮಂಜುನಾಥ್ ಉಡುಪಿಯ ಸಿಇಎನ್, ಸೈಬರ್-ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಣ ಕೋರಿ ನಕಲಿ ಫೇಸ್‌ಬುಕ್ ಖಾತೆಯಿಂದ ಇಂತಹ ಯಾವುದೇ ಸಂದೇಶಗಳು ಬಂದಲ್ಲಿ ಅದನ್ನು ನಿರ್ಲಕ್ಷಿಸುವಂತೆ ಮಂಜುನಾಥ್ ತಮ್ಮ ಸ್ನೇಹಿತರನ್ನು ಕೋರಿದ್ದಾರೆ. ಇನ್ನು ಮಂಜುನಾಥ್ ಅವರು ತಮ್ಮ ದೂರಿನಲ್ಲಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ನಕಲಿ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡುವಂತೆ ವಿನಂತಿ ಮಾಡಿಕೊಂಡಿದ್ದಾರೆ.