ಪೊಲೀಸ್ ಅಧಿಕಾರಿ ರಾಜೀನಾಮೆ ವಿರೋಧಿಸಿ ಪ್ರತಿಭಟನೆ

ಟೆಲ್‌ಅವೀವ್, ಜು೭- ವೆಸ್ಟ್ ಬ್ಯಾಂಕ್‌ನ ಜಿನಿನ್‌ನಲ್ಲಿದ್ದ ವಿದ್ರೋಹಿಗಳ ವಿರುದ್ಧ ಯಶಸ್ವಿ ಸಮರ ಸಾಧಿಸಿದ್ದ ಇಸ್ರೇಲ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಇಸ್ರೇಲ್ ರಾಜಧಾನಿ ಟೆಲ್‌ಅವೀವ್ ಜಿಲ್ಲಾ ಪೊಲೀಸ್ ಕಮಾಂಡರ್ ಅಮಿ ಎಷೆದ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದನ್ನು ವಿರೋಧಿಸಿ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂಪುಟದ ಕಟ್ಟಾ ಬಲಪಂಥೀಯ ಸದಸ್ಯರು ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ದೇಶದೆಲ್ಲೆಡೆ ನಡೆಯುತ್ತಿರುವ ಸರಕಾರಿ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಹೆಚ್ಚುವರಿ ಬಲಪ್ರಯೋಗಿಸಿ ಪ್ರತಿಭಟನೆಯನ್ನು ಹತ್ತಿಕ್ಕುವಂತೆ ತಮ್ಮ ಮೇಲೆ ಒತ್ತಡ ತರುತ್ತಿದ್ದು ಇದನ್ನು ವಿರೋಧಿಸಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಎಷೆದ್ ಹೇಳಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಿದ್ದುಪಡಿ ಮಾಡುವ ಸರಕಾರದ ನಿರ್ಧಾರವನ್ನು ವಿರೋಧಿಸಿ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ರಸ್ತೆ ತಡೆ ನಡೆಸಿ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗುತ್ತಿರುವ ಪ್ರತಿಭಟನಾಕಾರರನ್ನು ಹೆಚ್ಚುವರಿ ಬಲಪ್ರಯೋಗಿಸಿ ನಿಯಂತ್ರಿಸುವ ಅಗತ್ಯವಿದೆ ಎಂದು ಕಳೆದ ವಾರ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ಗ್ವಿವರ್ ಆಗ್ರಹಿಸಿದ್ದರು. ಬುಧವಾರ ಟಿವಿ ವಾಹಿನಿಯಲ್ಲಿ ರಾಜೀನಾಮೆಯನ್ನು ಪ್ರಕಟಿಸಿದ ಎಷೆದ್, ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ವೃತ್ತಿಪರ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಹಸ್ತಕ್ಷೇಪ ಮಾಡಿರುವ ಸಚಿವ ಶ್ರೇಣಿಯ ನಿರೀಕ್ಷೆಗೆ ತಕ್ಕಂತೆ ತನಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.