ಪೊಲೀಸ್‌ರ ಕಾರ್ಯವೈಖರಿ ಸಿ.ಎಂ. ಶಹಬ್ಬಾಸ್‌ಗಿರಿ

ಬೆಂಗಳೂರು.ಏ.೨- ಪೊಲೀಸರ ಕ್ಷೇಮಾಭಿವೃದ್ಧಿ ಜೊತೆಗೆ ಇಲಾಖೆಯ ಆಧುನೀಕರಣಕ್ಕೂ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅವರು ತಿಳಿಸಿದಾರೆ.
ನಗರದ ಕೆಎಸ್‌ಆರ್‌ಪಿ ಮೈದಾನದಲ್ಲಿಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪೊಲೀಸ್ ಪಡೆಗಳ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.
ಪೊಲೀಸರ ಕ್ಷೇಮಾಭಿವೃದ್ಧಿಯ ನಿಟ್ಟಿನಲ್ಲಿ ಆರೋಗ್ಯಭಾಗ್ಯ ಯೋಜನೆಯಡಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಚಿಕಿತ್ಸೆ ನೀಡಿದ ವಿವಿಧ ಆಸ್ಪತ್ರೆಗಳಿಗೆ ತೆಗೆದಿರಿಸಿದ ೨೦೦. ಕೋಟಿ ರೂಗಳಲ್ಲಿ ೧೦೦ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಯ ಆರೋಗ್ಯ ಸೇವೆಗಳಿಗೆ ೨೦ ಕೋಟಿ ತೆಗೆದಿರಿಸಲಾಗಿದ್ದು, ಅದರಲ್ಲಿ ಏಳೂವರೆ ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಒದಗಿಸಲು ೧,೦೩೪ ಕೋಟಿ ರೂಗಳನ್ನು. ಒದಗಿಸಲಾಗಿದ್ದು, ಹಂತ ಹಂತವಾಗಿ ಕಾಮಗಾರಿಗಳು ಆರಂಭಗೊಳ್ಳಲಿದೆ ಎಂದರು.
ದಣಿವಿಲ್ಲದೆ ಕೆಲಸ:
ರಾಜ್ಯ ಪೊಲೀಸ್ ವ್ಯವಸ್ಥೆಯು ದೇಶದ ಅತ್ಯುತ್ತಮ ಪೊಲೀಸ್ ವ್ಯವಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಅಪರಾಧ, ತಡೆ, ಪತ್ತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಹಬ್ಬ ಹರಿದಿನಗಳೆನ್ನದೆ ದಣಿವಿಲ್ಲದೆ ರಾಜ್ಯ ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಶಾಂತಿಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಶ್ರಮಿಸಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡದೆ ನಿಕ್ಸಲ್ ಹಾಗೂ ಉಗ್ರಗಾಮಿ ಚಟುವಟಿಕೆಗಳನ್ನು ನಿಗ್ರಹ ಮಾಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಬಣ್ಣಿಸಿದರು.
ನೈತಿಕ ಸ್ಥೈರ್ಯ ಹೆಚ್ಚಳ:
ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸಲು ಸರ್ಕಾರ ಹಲವು ಕ್ರಮಕೈಗೊಂಡಿದೆ ಎಂದ ಅವರು, ಸ್ವಂತ ಕಟ್ಟಡಗಳಿಲ್ಲದ ರಾಜ್ಯದ ೧೦೦ ಪೊಲೀಸ್ ಠಾಣೆಗಳಿಗೆ ೫ ವರ್ಷಗಳಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ೨೦೦ ಕೋಟಿ ರೂ. ತೆಗೆದಿರಿಸಲಾಗಿದೆ ಎಂದರು.
ಮಹಿಳೆಯರ ಸುರಕ್ಷಿತೆವಾಗಿ ನಿರ್ಭಯ ಯೋಜನೆಯಡಿ ೬೬೭ ಕೋಟಿ ವೆಚ್ಚದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕರಾವಳಿ ಪ್ರದೇಶವನ್ನು ಬಲಪಡಿಸಲು ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಕೊಡಗು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಂಕೀರ್ಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ಸೈಬರ್ ಕ್ರೈಮ್ ಬೇಧಿಸುವಲ್ಲಿ ರಾಜ್ಯದ ಪೊಲೀಸರು ದಕ್ಷತೆ ಮೆರೆದಿದ್ದಾರೆ. ಡ್ರಗ್ಸ್ ಜಾಲ ಸದೆ ಬಡಿದಿದ್ದಾರೆ ಎಂದರು.
ಜಿಲ್ಲೆಗೊಂದು ಎಫ್‌ಎಸ್‌ಎಲ್:
ರಾಜ್ಯದ ಜಿಲ್ಲೆಗೊಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತೆರೆಯುವ ಚಿಂತನೆ ಇದೆ. ಕಾಲೇಜು ಹೆಣ್ಣುಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ಕೊಡಲಿದ್ದೇವೆ. ನಮ್ಮ ಪೊಲೀಸರು ಎಂಥ ಸವಾಲನ್ನೂ ಮೆಟ್ಟಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಪೊಲೀಸ್ ಚಾಣಾಕ್ಷತೆ :
ಸಂಕೀರ್ಣ ಅಪರಾಧ ಪ್ರಕರಣಗಳನ್ನು ನಮ್ಮ ಪೊಲೀಸರು ಬಗೆಹರಿಸಿದ್ದಾರೆ.ಆದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ಕಡೆಯಿಂದ ಟೀಕೆ ಟಿಪ್ಪಣಿ ಬರುತ್ತಿವೆ. ನಮ್ಮ ಗುರಿ ಮತ್ತು ದಾರಿ ತಪ್ಪಿಸುವ ಯತ್ನ ನಡೆಯುತ್ತಿವೆ. ಆದರೆ, ನಮ್ಮ ಪೊಲೀಸರು ತಾಳ್ಮೆಯಿಂದ ಟೀಕೆ ಟಿಪ್ಪಣಿ ಸಹಿಸಿಕೊಂಡು ಉತ್ತರ ಕೊಡುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ೧೨೫ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ೨೦೨೦ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಪ್ರದಾನ ಮಾಡಿದರು.
ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ಸೂದ್ ಅವರಿದ್ದರು