ಪೊಲೀಸರ ಸೋಗಿನಲ್ಲಿ ದರೋಡೆ ಅಪಹರಣ ಐವರು ಸೆರೆ ನಗ ನಾಣ್ಯ ವಶ

ಬೆಂಗಳೂರು, ಜ.೧೫- ಪೊಲೀಸರ ಸೋಗಿನಲ್ಲಿ ಬಂದು ದರೋಡೆ ಮಾಡಿ, ಹೆಚ್ಚಿನ ಹಣಕ್ಕಾಗಿ ಮಗನನ್ನು ಅಪಹರಿಸಿ, ಜೀವ ಬೆದರಿಕೆ ಹಾಕಿದ್ದ ಇಬ್ಬರು ರೌಡಿಗಳು ಸೇರಿ ಐವರನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಗುಂಟೆಯ ರೌಡಿ ಬಾಲಕೃಷ್ಣ (೨೩)ಯಲಹಂಕದ ರೌಡಿ ಚೇತನ್ ಕುಮಾರ್ (೨೭)ಮಲ್ಲಸಂದ್ರದ ಪುನೀತ್ (೨೪)
ಶಿವಮೊಗ್ಗದ ಪೃಥ್ವಿ (೨೩)ಸಿಂಗಾಪುರ ಲೇಔಟ್ ನ ರೋಹನ್(೨೪) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ವಸಂತರಾವ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತರಿಂದ ೧೬ ಲಕ್ಷ ಮೌಲ್ಯದ ೩೧೮ ಗ್ರಾಂ ಚಿನ್ನಾಭರಣ ಮತ್ತು ೧೦.೩ ಲಕ್ಷ ರೂ. ನಗದು ಹಣ ಕೃತ್ಯಕ್ಕೆ ಬಳಸಿದ್ದ ೨ ದ್ವಿಚಕ್ರವಾಹನಗಳು ಮತ್ತು ೧ ಚಾಕುವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳು ಕಳೆದ ಡಿ. ೩೧ ರಂದು ಮಧ್ಯಾಹ್ನ ೧ರ ವೇಳೆ ಮಹಾಲಕ್ಷ್ಮಿ ಲೇಔಟ್ ಬಳಿಯ ಭೋವಿಪಾಳ್ಯದ ಖಾಸಗಿ ಕಂಪನಿಯ ಉದ್ಯೋಗಿ ಸಮಯನಾಯ್ಕ್ ಅವರ ಮನೆಗೆ ಪೊಲೀಸರ ನೆಪದಲ್ಲಿ ಮನೆಯೊಳಗೆ ಬಂದು ಮನೆಯಲ್ಲಿದ್ದ ನಗದು ಚಿನ್ನಾಭರಣವನ್ನು ತೆಗೆದುಕೊಂಡು ಅವರ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಸುತ್ತಾಡಿಸಿ, ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ, ನಂತರ ಬಿಟ್ಟು ಹೋಗಿದ್ದರು
ಈ ಸಂಬಂಧ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ದರೋಡೆ, ಅಪಹರಣ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಇನ್ಸ್‌ಪೆಕ್ಟರ್ ಲೇಪಾಕ್ಷಮೂರ್ತಿ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿಚಾರಣೆಯಲ್ಲಿ ಬಂಧಿತ ಮೂರನೇ ಆರೋಪಿ ರೋಹನ್ ದೂರುದಾರ ಸಮಯನಾಯ್ಕ್ ಅವರ ಸಂಬಂಧಿಕರಾಗಿದ್ದು ಅವರು ಶ್ರೀಮಂತರಾಗಿರುವುದನ್ನು ತಿಳಿದು ವ್ಯವಹಾರಕ್ಕಾಗಿ ಹಣಕಾಸಿನ ನೆರವು ಕೇಳಿದ್ದ.
ಆದರೆ ಸಮಯನಾಯ್ಕ್ ಅವರು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಬೇಕು. ಈ ಸಮಯದಲ್ಲಿ ಹಣವನ್ನು ನೀಡಲು ನಿರಾಕರಿಸಿರುತ್ತಾರೆ. ಇದರಿಂದ ಕೋಪಗೊಂಡು ತನ್ನ ಸ್ನೇಹಿತರಾದ ಇತರ ಆರೋಪಿಗಳನ್ನು ಸಂಪರ್ಕಿಸಿ, ಅವರುಗಳಿಗೆ ಈ ವಿಚಾರ ತಿಳಿಸಿ ಎಲ್ಲರೂ ಸೇರಿ ಪೊಲೀಸರ ಸೋಗಿನಲ್ಲಿ ಕೃತ್ಯವೆಸಗಿದ್ದಾರೆ.
ಆರೋಪಿಗಳಾದ ರೌಡಿ ಬಾಲಕೃಷ್ಣ ಸುಬ್ರಮಣ್ಯನಗರ ಮತ್ತು ಗಂಗಮ್ಮಗುಡಿ ಪೊಲೀಸ್ ಠಾಣೆಯ ದ್ವಿಚಕ್ರವಾಹನ ಕಳವು ಪ್ರಕರಣದ ಆರೋಪಿಯಾಗಿದ್ದು ಬಾಗಲಗುಂಟೆ ಮತ್ತು ಪೀಣ್ಯ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದಾನೆ.
ಬಾಗಲಗುಂಟೆ, ಪೀಣ್ಯ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಂದಿದ್ದು. ಮಂಡ್ಯ ಜಿಲ್ಲೆ ಪೂರ್ವ ಹಾಗೂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದರು.
ಮತ್ತೊಬ್ಬ ಆರೋಪಿ ಚೇತನ್ ಕುಮಾರ್ ಯಲಹಂಕ ಪೊಲೀಸ್ ಠಾಣೆಯ ಕೊಲೆ ಪ್ರಕರಣದಲ್ಲಿ ಭಾಗಿ ಜೈಲಿಗೆ ಹೋಗಿ ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.