ಪೊಲೀಸರ ವರ್ತನೆಗೆ ಬೇಸರ- ಕರಮ್ಮೆ ನಾಯಕ

ದೇವದುರ್ಗ.ಸೆ.೨೧- ತಾಲೂಕಿನಲ್ಲಿ ಜೆಡಿಎಸ್ ಪ್ರಬಲವಾಗಿ ಬೆಳೆಯುತ್ತಿರುವುದನ್ನು ಸಹಿಸದ ಶಾಸಕರು ಅಧಿಕಾರಿಗಳ ಮುಖಾಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕಿ ಕರಮ್ಮೆ ಜಿ.ನಾಯಕ ಆರೋಪಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿದರು. ಜೆಡಿಎಸ್ ಕಾರ್ಯಕರ್ತರು ಹಾಗೂ ಪಕ್ಷದ ತಾಲೂಕು ಅಧ್ಯಕ್ಷರ ಮೇಲೆ ಹಲವಾರು ಪ್ರಕರಣಗಳನ್ನ ದಾಖಲಿಸಿ, ಶಾಸಕರು ಕಿರುಕುಳ ನೀಡುತ್ತಿದ್ದಾರೆ. ತಾಲೂಕಿನಲ್ಲಿ ಪಕ್ಷದ ಪರ ಒಲವು ಹೆಚ್ಚಾಗುತ್ತಿರುವುದನ್ನ ಸಹಿಸಿಕೊಳ್ಳದೆ ಅಧಿಕಾರಿಗಳ ಮೂಲಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಜೆಡಿಎಸ್ ಕಾರ್ಯಕರ್ತರಾದ ಕೆಲ ಆಟೋ ಡ್ರೈವರ್‌ಗಳು ಆಟೋದ ಮೇಲೆ ಜೆಡಿಎಸ್ ಪಕ್ಷದ ಚಿಹ್ನ ಹಾಕಿಕೊಂಡಿರುವುದಕ್ಕೆ ಪೊಲೀಸರು ಕಿರಿಕಿರಿ ಕೊಡುತ್ತಿದ್ದಾರೆ. ಹಾಗೇ ಕಾರ್ಯಕ್ರಮ ನಿಮಿತ್ತ ಜೆಡಿಎಸ್ ಪಕ್ಷದ ಬ್ಯಾನರ್, ಫ್ಲೆಕ್ಸ್ ಹಾಕುವುದಕ್ಕೂ ಕೂಡ ಅವಕಾಶ ಕೊಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಲ್ಲದೆ ಪಕ್ಷದ ವರಿಷ್ಠರಾದ ಹೆಚ್‌ಡಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶ್ಯಾಮ್ ಸುಂದರ್ ಅಬಕಾರಿ, ರೇಣುಕಾ, ಶಾಹಲಂ ಉದ್ದಾಲ್, ತಬಾಸುಮ್ ಉದ್ದಾರ್, ಸೆಮಿನಾ, ದಾವುದ್ ಔಂಟಿ, ವೆಂಕನಗೌಡ ವಕೀಲರು, ಹನುಮಂತ್ರಾಯ ಚಿಂತಲಕುಂಟಿ ವಕೀಲರು, ರಂಗಣ್ಣ ಪಾಟೀಲ್, ಇಬ್ರಾಹಿಂ, ಗೋಕುಲ್ ಸಾಬ್ ಗೌರಂಪೇಟೆ, ಇತರರಿದ್ದರು.