ಪೊಲೀಸರ ಮೇಲೆ ಗುಂಡು ಹಾರಾಟ

ಮುಂಜಾನೆ ನಡೆದ ಘಟನೆ | ಮೂವರ ಬಂಧನ
ಬಂಟ್ವಾಳ, ಮಾ.೨೬- ದುಷ್ಕರ್ಮಿಗಳ ತಂಡವೊಂದನ್ನು ಅಡ್ಡಗಟ್ಟಿ ಬಂಧಿಸಲು ಮುಂದಾದ ವೇಳೆ ತಂಡ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿರುವ ಘಟನೆ ವಿಟ್ಲ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಇಂದು (ಶುಕ್ರವಾರ) ಮುಂಜಾನೆ ನಡೆದಿದೆ.
ಕೇರಳದಲ್ಲಿ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿ ವಿಟ್ಲ ಮೂಲಕ ಬಿಳಿ ಬಣ್ಣದ ಕಾರ್‌ನಲ್ಲಿ ಪರಾರಿಯಾಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಎಸೈ ವಿನೋದ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ದುಷ್ಕರ್ಮಿಗಳು ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದೆ. ಈ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳು ಗುಂಡು ಹಾರಿಸಿದರೂ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರಿನಲ್ಲಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಎಸ್‌ಐ ವಿನೋದ್ ರೆಡ್ಡಿ ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.