ಹಲಸೂರು ಗೇಟ್ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿರುವ ಸುಮಾರು ೨.೭೦ ಕೋಟಿ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯುಕ್ತ ದಯಾನಂದರವರು ಪರಿಶೀಲಿಸಿದರು. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಶ್ರೀನಿವಾಸ್ ಗೌಡ, ಎಸಿಪಿ ನಾರಾಯಣಸ್ವಾಮಿ, ಇನ್ಸ್‌ಪೆಕ್ಟರ್ ಜಗದೀಶ್ ಮತ್ತಿತರ ಅಧಿಕಾರಿಗಳು ಇದ್ದಾರೆ.
ಬೆಂಗಳೂರು,ಜೂ.೭-ಮನೆ ಕವು, ವಾಹನ ಕಳವು, ಸುಲಿಗೆ ಬೆದರಿಕೆ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ೧೦೬ ಮಂದಿ ಆರೋಪಿಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಕೇಂದ್ರ ವಿಭಾಗದ ಪೊಲೀಸರು. ೨.೭೦ ಕೋಟಿ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಶೇಷಾದ್ರಿಪುರಂ, ವೈಯಾಲಿಕಾವಲ್, ಹಲಸೂರು ಗೇಟ್, ಅಶೋಕ್ ನಗರ, ವಿವೇಕ್ ನಗರ ಪೊಲೀಸರು ೧೪ ಮಂದಿ ಆರೋಪಿಗಳನ್ನು ಬಂಧಿಸಿ ೧೯ ಪ್ರಕರಣಗಳನ್ನು ಬೇಧಿಸಿ ೨ ಕೆಜಿ ೧೧೦ ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.
ಹಲಸೂರ್ ಗೇಟ್, ವಿವೇಕನಗರ ಪೊಲೀಸರು ಮೂವರನ್ನು ಬಂಧಿಸಿ ೬೩ ಲಕ್ಷ ಮೌಲ್ಯದ ೧೫೮ ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಶೇಷಾದ್ರಿಪುರಂ ಅಶೋಕನಗರ ಪೊಲೀಸರು ದ್ವಿಚಕ್ರ ವಾಹನ ಕಳುವಿನ ೭ ಪ್ರಕರಣ ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು. ಕಬ್ಬನ್ ಪಾರ್ಕ್ ಪೊಲೀಸರು ಕ್ಷಿನ್ಸ್ಸ್ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಮುಂಭಾಗ ಶಸ್ತ್ರಾಸ್ತ್ರ ಮಾರಾಟ ಮಾಡಲು ಬಂದಿದ್ದ ಆರೋಪಿ ಒಬ್ಬನನ್ನು ಬಂಧಿಸಿ ೩ ಪಿಸ್ತೂಲ್, ೯೯ ಜೀವಂತ ಗುಂಡುಗಳು ಹಾಗೂ ಕಾರನ್ನು ಜಪ್ತಿ ಮಡಿದ್ದಾರೆ ಎಂದು ತಿಳಿಸಿದರು.
ಶೇಷಾದ್ರಿಪುರಂ ಪೊಲೀಸರು ಆರ್.ಪಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ಬಂದ ಇಬ್ಬರು ಸರಗಳ್ಳರನ್ನು ಬಂಧಿಸಿ ೭೫ಕ್ಕೂ ಹೆಚ್ಚು ಸರಗಳ್ಳತನದಲ್ಲಿ ಭಾಗಿಯಾಗಿರುವುದುನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಯು ಬಂಧಿತ ಮತ್ತೊಬ್ಬ ಆರೋಪಿ ಜತೆ ಸೇರಿಕೊಂಡು ಗದಗ, ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧೆಡೆ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿಸಿದರು.
ಅಶೋಕ ನಗರ ಪೊಲೀಸರು ಒಂಟಿ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗುತ್ತಿದ್ದ ಸೈಯದ್ ಖಾಸಿಮ್‌ನನ್ನು ಬಂಧಿಸಿ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ವಿವೇಕನಗರ ಪೊಲಿಸರು ಮೊಬೈಲ್ ಕಳವು ಮಾಡಿ ಪರಾರಿಯಾಗುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ ೪೦ ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಹಳೆ ಕಳ್ಳನಾಗಿದ್ದು, ಆತನಿಂದ ೧೧೩ ವಿವಿಧ ಕಂಪನಿಗಳ ಮೊಬೈಲ್ ಜಪ್ತಿ ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಾದಕ ವಸ್ತು ಮಾರಾಟ ವ್ಯಸನಿಗಳನ್ನು ಕಾರ್ಯಾಚರಣೆ ನಡೆಸಿ ೭೦ ಪ್ರಕರಣಗಳನ್ನು ಕೇಂದ್ರ ವಿಭಾಗದ ಪೊಲೀಸರು ದಾಖಲಿಸಿದ್ದಾರೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಶ್ರೀನಿವಾಸಗೌಡ ಅವರಿದ್ದರು.