ಪೊಲೀಸರ ಕಾರ್ಯ ವೈಖರಿ ಜ್ಞಾನೇಂದ್ರ ಬೇಸರ

ಶಿವಮೊಗ್ಗ, ಡಿ. ೩- ಪೊಲೀಸರ ಕಾರ್ಯ ವೈಖರಿ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿಟ್ಟು, ಸೆಡವು, ಅಸಮಾಧಾನ ಹೊರ ಹಾಕಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೊಲೀಸರನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದು ಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆ ಕೊಪ್ಪದ ತಮ್ಮ ನಿವಾಸದಿಂದ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ಕ್ಲಾಸ್ ತೆಗೆದು ಕೊಂಡಿದ್ದಾರೆ.
ಪೊಲೀಸರಿಗೆ ಸರ್ಕಾರ ಕೈ ತುಂಬಾ ಸಂಬಳ ಕೊಡುತ್ತೆ. ಆದರೂ ಪೊಲೀಸರು ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ.
ಕೆಲಸ ಮಾಡಲಿಕ್ಕೆ ಇಷ್ಟ ಇಲ್ಲದಿದ್ದರೆ ಯೂನಿಫಾರಂ ಬಿಚ್ಚಿಟ್ಟು ಮನೆಗೆ ಹೋಗಿ ಮಣ್ಣು ಹೊರಲಿ ಎಂದು ಕಿಡಿಕಾರಿದ್ದಾರೆ.
ಗೋವು ಸಾಗಾಟ ಮಾಡುವವರು ಯಾರು ಎಂಬುದು ಪೊಲೀಸರಿಗೆ ಗೊತ್ತಿದೆ. ಲಂಚ ತಿಂದು ನಾಯಿ ತರ ಬಿದ್ದುಕೊಂಡಿರ್‍ತಾರೆ ಪೊಲೀಸರಿಗೆ ಆತ್ಮಗೌರವ ಬೇಕಲ್ಲರೀ… ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಗೃಹ ಸಚಿವನಾಗಿ ಇರಬೇಕಾ ಬೇಡ್ವಾ? ಎಂದು ಪ್ರಶ್ನಿಸಿದ ಸಚಿವರು ಪೊಲೀಸರು ಕೆಟ್ಟು ಹಾಳಾಗಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವರ ಸ್ಪಷ್ಟನೆ

ನಾನು ಎಲ್ಲಾ ಪೊಲೀಸರ ವಿರುದ್ಧ ಮಾತನಾಡಿಲ್ಲ. ಗೋ ಕಳ್ಳರಿಗೆ ಬೆಂಬಲ ನೀಡುವ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಬಗ್ಗೆ ನನಗೆ ಗೌರವ ಇದೆ. ಮೊನ್ನೆ ಗೋ ಕಳ್ಳರನ್ನು ಹಿಡಿಯಲು ಹೋದವರ ಮೇಲೆಯೇ ಕಾರು ಹತ್ತಿಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದು ಅವರು ಬದುಕುಳಿದಿರುವುದು ಪವಾಡ.ಈ ಘಟನೆಯಿಂದ ಬೇಸರವಾಗಿ ಮಾತನಾಡಿದ್ದೇನೆ ಎಂದರು.
ಪೊಲೀಸರ ಮೇಲೆ ನನಗೆ ಗೌರವ ಇದೆ. ಎಲ್ಲಾ ಪೊಲೀಸರು ಒಂದೇ ರೀತಿ ಇರುವುದಿಲ್ಲ. ಕರ್ನಾಟಕದಲ್ಲಿ ದಕ್ಷ ಪೊಲೀಸರೂ ಇದ್ದಾರೆ ಎಂದು ತಿಳಿಸಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆ ಸಂಚು ಪ್ರಕರಣ ಕುರಿತು ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾವ ಶಾಸಕರಿಗೂ ಹಾಗೆ ಆಗಬಾರದು. ಮುಖವಾಡ ಕಳಚುವಂತೆ ಮಾಡುತ್ತೇವೆ. ಪೊಲೀಸ್ ಕಾಯಿದೆ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಶಾಸಕ ವಿಶ್ವನಾಥ್ ಅವರಿಗೆ ಎಲ್ಲಾ ಭದ್ರತೆ ನೀಡಲಾಗಿದೆ ಎಂದರು.