ಪೊಲೀಸರ ಕಾರ್ಯ ಅನನ್ಯ : ಕಜಗಲ್ಲ

ಬಾಗಲಕೋಟೆ : ಏ 3 : ನಾಡಿನ ಶಾಂತಿ ಹಾಗೂ ಕಾನೂನು ಪಾಲನೆಗಾಗಿ ಶ್ರಮಿಸುತ್ತಿರುವ ಪೊಲೀಸರ ಕಾರ್ಯ ಅನನ್ಯವಾದುದು ಎಂದು ನಿವೃತ್ತ ಪಿ.ಎಸ್.ಐ ಬಿ.ವಾಯ್.ಕಜಗಲ್ಲ ಹೇಳಿದರು.
ನವನಗರದ ಪೊಲೀಸ್ ಕವಾಯತ ಮೈದಾನದಲ್ಲಿ ಹಮ್ಮಿಕೊಂಡ ಪೊಲೀಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ವಂದನೆ ಸ್ವೀಕಾರ ಮತ್ತು ಸಾಂಪ್ರದಾಯಕ ಕವಾಯತ್ ವೀಕ್ಷಿಸಿ ಮಾತನಾಡಿದ ಅವರು ಸಮಾಜ ಸುರಕ್ಷತೆಯ ಹೊಣೆ ಹೊತ್ತು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ನಿವೃತ್ತಿ ನಂತರ ಶ್ರಮವನ್ನು ನೆನಪಿಸಿಕೊಳ್ಳುವ ದಿನ ಇದಾಗಿದೆ. ನಿವೃತ್ತಿಯ ನಂತರವೂ ಕರೆದು ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ದೇಶದ ಗಡಿಯಲ್ಲಿ ಸೈನಿಕರು ದೇಶದ ರಕ್ಷಣೆ ಮಾಡಿದರೆ, ಪೊಲೀಸರು ಸಮಾಜದ ರಕ್ಷಣೆ ಮಾಡುತ್ತಿದ್ದಾರೆ. ಪೊಲೀಸ್ ವೃತ್ತಿ ಮಹತ್ವವಾಗಿದೆ. ಪೊಲೀಸರು ವೃತ್ತಿಯಿಂದ ನಿವೃತ್ತರಾಗಬೇಕು ವಿನಃ ಕರ್ತವ್ಯ ಪ್ರಜ್ಞೆಯಿಂದಲ್ಲ. ತುರ್ತು ಸಂದರ್ಭದಲ್ಲಿಯೂ ನಿವೃತ್ತರಾದವು ಕರ್ತವ್ಯಕ್ಕೆ ಸಿದ್ದರಾಗಿರಬೇಕು ಎಂದು ತಿಳಿಸಿದ ಕಜಗಲ್ಲ ಅವರು ತಮ್ಮ 38 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ನಿರ್ವಹಿಸಿದ ಕಾರ್ಯವನ್ನು ಬಗ್ಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೆನಪಿಸಿ ಅವರ ಸೇವೆಯನ್ನು ಸ್ಮರಿಸುವ ದಿನ ಇದಾಗಿದೆ. ಜಿಲ್ಲಾ ಪೊಲೀಸ್ ಘಟಕದಲ್ಲಿ ಕೈಗೊಂಡ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 2019-20ರಲ್ಲಿ 21 ಜನರಿಗೆ 2,73,957 ರೂ. ಹಾಗೂ 2020-21 ರಲ್ಲಿ 36 ಜನ ನಿವೃತ್ತ ಪೊಲೀಸರಿಗೆ 2,88,198 ರೂ.ಗಳನ್ನು ಕಲ್ಯಾಣ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯ ನೀಡಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಭಾಗ್ಯ ಯೋಜನೆಯಡಿ 2019-20ರಲ್ಲಿ 18 ಜನ, 2020-21ರಲ್ಲಿ 11 ಜನ ಚಿಕಿತ್ಸೆ ಪಡೆದಿದ್ದಾರೆ. ಕಳೆದ 2 ವರ್ಷದಲ್ಲಿ ಈ ಂiÀÉೂೀಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ 600 ಜನ ಪೊಲೀಸರು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 12 ಜನ ಪೊಲೀಸ್ ಮಕ್ಕಳಿಗೆ 95 ಸಾವಿರ ರೂ. ಪ್ರೋತ್ಸಾಹಧನ, 9 ಜನ ಅಂತ್ಯಸಂಸ್ಕಾರಕ್ಕೆ 90 ಸಾವಿರ ರೂ. ನೀಡಲಾಗಿದೆ. ಮುಧೋಳದಲ್ಲಿ ಆಧುನಿಕ ಸುಸಜ್ಜಿತ ಪೊಲೀಸ್ ಸಮುದಾಯ ಭವನ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಕಳೆದ ಎರಡು ವರ್ಷದಲ್ಲಿ ನಿವೃತ್ತಿ ಹೊಂದಿರುವ 35 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ವಿವಿಧ ತಂಡಗಳಿಂದ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಡಿಎಸ್‍ಪಿಗಳಾದ ಎಂ.ಪಾಂಡುರಂಗಯ್ಯ, ರವೀಂದ್ರ ಶಿರೂರ, ಚಂದ್ರಶೇಖರ ನಂದರೆಡ್ಡಿ, ಭರತ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.