ಪೊಲೀಸರ ಕಣ್ತಪ್ಪಿಸಿ‌ ಪರೋಟ ಮಾರುತ್ತಿದ್ದ ಕೈದಿ ಸೆರೆ

ಚಾಮರಾಜನಗರ,ಡಿ.3- ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತಂದಿದ್ದ ವೇಳೆ ಕೆಎಸ್ಆರ್​​​​ಟಿಸಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಿಂದ ತಪ್ಪಿಸಿಕೊಂಡಿದ್ದ ಕೈದಿಯನ್ನು ಜಿಲ್ಲಾ ವಿಶೇಷ ಪೊಲೀಸ್‌ ತಂಡ ಬಂಧಿಸಿದೆ.
ನಗರದ ಗಾಳಿಪುರ ಬಡಾವಣೆ ನಿವಾಸಿಯಾದ ರಫೀಕ್ ಬಂಧಿತ ಅಪರಾಧಿ. ಈತನ ವಿರುದ್ಧ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 9ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.ಮನೆ ಕಳ್ಳತನ, ರಾಬರಿಯಲ್ಲಿ ಈತ ಕುಖ್ಯಾತಿ ಹೊಂದಿ ಒಂದು ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. 2013ರಲ್ಲೂ ಈತ ನಂಜನಗೂಡು ಸಮೀಪ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಚಾಣಾಕ್ಷತನ ತೋರಿದ್ದ.ಮೂರು ವರ್ಷಗಳಾದರೂ ಪತ್ತೆಯಾಗ‌ದ ಈತನನ್ನು ಬಂಧಿಸಲು ಚಾಮರಾಜನಗರ ಎಸ್ಪಿ ವಿಶೇಷ ತಂಡ ರಚಿಸಿದ್ದರು. ಅದರಂತೆ, ಒಂದು ತಿಂಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ರಫೀಕ್‌ನ ಹೆಡೆಮುರಿ ಕಟ್ಟಿದ್ದಾರೆ‌.
ಬಳ್ಳಾರಿಯಲ್ಲಿ ಈತ ರಸ್ತೆಬದಿ ಪರೋಟ ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಬಲೆಗೆ ಬೀಳಿಸಿದ್ದು ಕಳೆದ ಮೂರು ವರ್ಷಗಳಿಂದ ಈತ ಫೋನ್ ಬಳಸದಿದ್ದುದು ಪತ್ತೆ ಕಾರ್ಯಕ್ಕೆ ಹಿನ್ನಡೆ ತಂದಿತ್ತಾದರೂ ಕೊನೆಗೂ ರಫೀಕ್‌ನನ್ನು ಜೈಲಿಗಟ್ಟಿದ್ದಾರೆ‌.
ಕಳೆದ ನವೆಂಬರ್ 30ರಂದು ಬಳ್ಳಾರಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಶೇಷ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ತಿಳಿಸಿದ್ದಾರೆ.