ಪೊಲೀಸರೆಂದು ನಂಬಿಸಿ ಸರ ಕಳ್ಳತನ

ಮಧುಗಿರಿ, ಏ. ೨- ಪಟ್ಟಣದ ನೌಕರರ ಸಂಘದ ಕಲ್ಯಾಣ ಮಂಟಪ ಪಕ್ಕದ ನ್ಯಾಯ ಬೆಲೆ ಅಂಗಡಿಯಲ್ಲಿ ರೇಷನ್ ಖರೀದಿಸಿದ ನಂತರ ದಣಿವಾರಿಸಿಕೊಳ್ಳುತಿದ್ದ ಈರಮ್ಮ ಎಂಬುವರ ಬಳಿಗೆ ಇಬ್ಬರು ವ್ಯಕ್ತಿಗಳು ಬಂದು ನಾವು ಪೊಲೀಸರು ಎಂದು ನಂಬಿಸಿ ಅವರ ಬಳಿ ಇದ್ದ ಬಂಗಾರದ ಸರ ಕಸಿದುಕೊಂಡು ಪರಾರಿಯಾಗಿದ್ದರೆ.
ಮೊದಲಿಗೆ ಬಂಗಾರದ ಸರ ಬಿಚ್ಚಿಕೊಡಿ ಎಂದು ಹೇಳಿ ಈ ರೀತಿ ಎಲ್ಲರಿಗೂ ಕಾಣಿಸಿಕೊಳ್ಳುವ ಹಾಗೆ ಹಾಕಿಕೊಳ್ಳಬಾರದು ಎಂದು ಅಲ್ಲೆ ಬಿದ್ದಿದ್ದ ಒಂದು ಪೇಪರ್‌ನಲ್ಲಿ ಸುತ್ತಿ ಸೀರೆಯ ಸೆರಗಿಗೆ ಕಟ್ಟಿ, ಇದನ್ನು ಮನೆಗೆ ಹೋಗಿ ಬಿಚ್ಚಿನೋಡಿಕೊಳ್ಳಬೇಕು ಎಂದು ಹೇಳಿ ಹೊರಟು ಹೋಗಿದ್ದಾರೆ. ಮನೆಗೆ ಬಂದ ಈರಮ್ಮ ಸೆರಗಿನಲ್ಲಿದ್ದ ಗಂಟನ್ನು ಬಿಚ್ಚಿ ನೋಡಿದಾಗ ಬಂಗಾರದ ಸರದ ಬದಲಿಗೆ ಎರಡು ಸಣ್ಣ ಕಲ್ಲುಗಳಿದ್ದು, ಸುಮಾರು ೩೫ ಗ್ರಾಂ ಬಂಗಾರದ ಸರವನ್ನು ನಂಬಿಸಿ ಮೋಸ ಮಾಡಿರುವ ಬಗ್ಗೆ ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.