ಪ್ಯಾರಿಸ್, ಜು.೩- ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಹರೆಯದ ಯುವಕನನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಬಳಿಕ ಪ್ಯಾರಿಸ್‌ನಲ್ಲಿ ಅಕ್ಷರಶಃ ದಂಗೆ ಎಂದಿದ್ದು, ಊಹೆಗೂ ನಿಲುಕದ ರೀತಿಯಲ್ಲಿ ಜನರ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಸಂಬಂಧಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಮಾರಕ ಅಸ್ತ್ರಗಳನ್ನು ಬಳಸುವ ವಿಚಾರದಲ್ಲಿ ಪೊಲೀಸರು ತಮ್ಮ ನಿಲುವನ್ನು ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ.
ನಾಹೆಲ್ (ಮೃತ ಯುವಕ)ನ ಸಾವಿನಿಂದ ಇಡೀ ದೇಶದಲ್ಲಿ ದಂಗೆ ಏಳಲು ನಾವು ಬಯಸುವುದಿಲ್ಲ. ಆದರೆ ಟ್ರಾಫಿಕ್ ಸ್ಥಳಗಳಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸುವುದನ್ನು ಪೊಲೀಸ್ ಸಿಬ್ಬಂದಿ ಕೈಬಿಡಬೇಕು. ನಾವು ಎಂದಿಗೂ ದ್ವೇಷ ಅಥವಾ ಗಲಭೆಗಳಿಗೆ ಕರೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಅಂಗಡಿಗಳ ದರೋಡೆ ಅಥವಾ ಲೂಟಿಯನ್ನು ನಾವು ಬೆಂಬಲಿಸುವುದಿಲ್ಲ. ಅಲ್ಲದೆ ನಾಹೆಲ್‌ಗಾಗಿ ಮಾಡಲಾಗುತ್ತಿಲ್ಲ ಎಂದು ತಿಳಿಸಿದ ಸಂಬಂಧಿ, ಪೊಲೀಸ್ ಸಿಬ್ಬಂದಿಗೆ ಸಲಹೆ ಕೂಡ ನೀಡಿದ್ದಾರೆ. ಫ್ರಾನ್ಸ್ ಪೊಲೀಸರಿಗೆ ಈ ನಿಟ್ಟಿನಲ್ಲಿ ಉತಮ ತರಬೇತಿ ನೀಡಬೇಕಿದೆ. ಯುವಕನೊಬ್ಬ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಲು ನಿರಾಕರಿಸಿದರೆ ಆತನ ಮೇಲೆ ಮಾರಕ ಅಸ್ತ್ರದ ಮೂಲಕ ಬಲವನ್ನು ಪ್ರದರ್ಶಿಸುವ ಪೊಲೀಸರ ಕಾನೂನಿನಲ್ಲಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಇನ್ನು ನಾಹೆಲ್ ಸಾವಿನ ಬಳಿಕ ಅಕ್ಷರಶಃ ಫ್ರಾನ್ಸ್‌ನಲ್ಲಿ ಜನತೆ ದಂಗೆ ಎದ್ದಿದ್ದು, ಸಿಕ್ಕ ಸಿಕ್ಕ ಕಡೆಗಳಲ್ಲಿ ಅಂಗಡಿಗಳನ್ನು ಲೂಟಿ ಮಾಡುವ ಜೊತೆಗೆ ಭಾರೀ ಸಂಖ್ಯೆಯ ವಾಹನಗಳಿಗೆ ಬೆಂಕಿ ನೀಡುವ ಮೂಲಕ ಧ್ವಂಸ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕಾಗಿ ಫ್ರಾನ್ಸ್ ಸರ್ಕಾರ ಸುಮಾರು ೪೦ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಿದೆ.