ಪೊಲೀಸರು, ಪತ್ರಕರ್ತರು ಜನಸ್ನೇಹಿಗಳಾಗಿ ಕೆಲಸ ಮಾಡಬೇಕು: ಎಸ್ಪಿ ಡಾ. ಸಿಬಿ ವೇದಮೂರ್ತಿ

ಯಾದಗಿರಿ:ಮೇ.18: ಪೊಲೀಸರು ಪತ್ರಕರ್ತರು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಪರಸ್ಪರ ಬಿನ್ನಾಭಿಪ್ರಾಯಗಳಿರದೇ ಸಹಯೋಗದ ಮೂಲಕ ಸಾಗಿದಲ್ಲಿ ಜಿಲ್ಲೆಯ ಅಭಿವೃದ್ಧಿಯಾಗಲಿದೆ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ. ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗದಂತೆ ಪತ್ರಿಕಾರಂಗವೂ ಪ್ರಮುಖ ಪಾತ್ರ ವಹಿಸುತ್ತಿದೆ ಆದ್ದರಿಂದ ಪತ್ರಕರ್ತರು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಇದು ಸೌಹಾರ್ದದಿಂದ ಎಲ್ಲ ಅಂಗಗಳು ಸಮಾನವಾಗಿ ಸಾಗಿದಾಗ ಅಭ್ಯುದಯ ಸಾಧ್ಯ ಎಂದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಇಂಧುದರ ಸಿನ್ನೂರ ಮಾತನಾಡಿ, ನೂತನ ಎಸ್ಪಿಯಾಗಿ ವೇದಮೂರ್ತಿ ಅವರು ಜಿಲ್ಲೆಗೆ ಆಗಮಿಸಿರುವದು ತುಂಬಾ ಸಂತೋಷದ ವಿಷಯವಾಗಿದೆ. ಸಮಾಜದ ಕಳಕಳಿ ಹೊಂದಿರುವ ಎಸ್ಪಿಯವರು ಜಿಲ್ಲೆಯಲ್ಲಿ ಕಾನೂನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪತ್ರಕರ್ತರಾದ ಅನಿಲ್ ದೇಶಪಾಂಡೆ ಪ್ರವೀಣ ನಾಯಕ ಹಾಗೂ ಸುನೀಲ್ ಪಾಟೀಲ್ ಅವರು ನೂತನ ಎಸ್ಪಿ ಅವರ ಕುರಿತು ಮಾತನಾಡಿದರು. ವೇದಿಕೆ ಮೇಲೆ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾ ಅಧ್ಯಕ್ಷ ರಾಜೇಶ ಪಾಟೀಲ ಯಡ್ಡಳ್ಳಿ ಇದ್ದರು. ಪತ್ರಕರ್ತರ ಲಕ್ಷ್ಮೀಕಾಂತ ಕುಲಕರ್ಣಿ ಅವರು ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ಭವನದ ಆವರಣದಲ್ಲಿ ಎಸ್ಪಿ ಅವರು ಸಸಿ ನೆಟ್ಟರು.