ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಲಿ: ಬಿಎಸ್ ವೈ ಕಿವಿಮಾತು

Roslin Mary late a.b.francncis head constable contorment police station receiving cm medal at v.soudha basavaraj bommi praveen sood are seen

ಬೆಂಗಳೂರು, ನ. ೨೦- ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು, ಜನಸಾಮಾನ್ಯರು ನಿರ್ಭೀತಿಯಿಂದ ಪೊಲೀಸ್ ಠಾಣೆಗೆ ಬರುವಂತಾಗಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಂದು ನಡೆದ ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಪೊಲೀಸರು ಹೆಚ್ಚು ಜನಸ್ನೇಹಿಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಕರ್ನಾಟಕ ಪೊಲೀಸ್ ಎಂದರೆ, ಅತ್ಯಂತ ವಿಶ್ವಾಸಾರ್ಹ ಹಾಗೂ ದಕ್ಷ ಪಡೆ ಎಂದೇ ಹೆಸರುಪಡೆದಿದೆ. ರಾಜ್ಯದ ಪೊಲೀಸರು ನಿಸ್ವಾರ್ಥ ಸೇವೆಯಿಂದ ಕರ್ತವ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಪೊಲೀಸ್ ಠಾಣೆಗಳಿಗೆ ಜನ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ನಿರ್ಭೀತಿಯಿಂದ ಬರುವಂತಹ ವಾತಾವರಣ ನಿರ್ಮಾಣ ಮಾಡುವಂತೆಯೂ ಅವರು ಕರೆನೀಡಿದರು.
ರಾಜ್ಯದ ಪೊಲೀಸರು ಕಾನೂನು ಸುವ್ಯವಸ್ಥೆ, ನಿರ್ವಹಣೆ, ಸಂಚಾರ ಸುರಕ್ಷತೆ, ಮುಕ್ತ ವಾರ್ತೆ ಸಂಗ್ರಹ, ಎಲ್ಲದರಲ್ಲಿಯೂ ತಮ್ಮ ವೃತ್ತಿ ನಿಪುಣತೆಯನ್ನು ತೋರಿದ್ದಾರೆ. ಸಮಾಜದ ಸ್ವಾಸ್ಥ್ಯ ಕದಡುವ ಸಮಾಜಘಾತುಕ ಶಕ್ತಿಗಳು, ಸಂಘಟಿತ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಹಗಲಿರುಳೂ ಶ್ರಮಿಸುತ್ತಿರುವುದು ಅಭಿನಂದನೀಯ ಎಂದರು.
ಅಪರಾಧಮುಕ್ತ ಸಮಾಜ ನಿರ್ಮಾಣದಲ್ಲಿ ರಾಜ್ಯ ಪೊಲೀಸರ ಬದ್ಧತೆ ಸ್ಮರಣೀಯ ಎಂದು ಅವರು ಹೇಳಿದರು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕೆ ಸರ್ಕಾರ ಒತ್ತು ಕೊಟ್ಟಿದೆ. ಪೊಲೀಸರ ಗೃಹ ನಿರ್ಮಾಣ ಯೋಜನೆಗೂ ಚಾಲನೆ ನೀಡಿದ್ದೇವೆ ಎಂದರು.
ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ. ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ಶಾಂತಿಯುತ ಸಮಾಜಕ್ಕೆ ಕಾರಣೀಭೂತರಾಗಿರುವ ಎಲ್ಲಾ ಪೊಲೀಸರಿಗೂ, ಮುಖ್ಯಮಂತ್ರಿಗಳು ಅಭಿನಂದನೆ ಹೇಳಿದರು.
ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಪರಿಹಾರ ಕೇಂದ್ರಗಳಾಗಿ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
೧೦ ಸಾವಿರ ರೂ. ಬಹುಮಾನ
ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸರಿಗೆ ಇನ್ನುಮುಂದೆ ಪದಕದ ಜೊತೆಗೆ ೧೦ ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ಅವರು ಪ್ರಕಟಿಸಿದರು. ಈ ಪದಕ ವಿಜೇತರರಿಗೆ ಅಷ್ಟೇಅಲ್ಲ, ಎಲ್ಲಾ ಪೊಲೀಸರಿಗೂ ಮಾದರಿ ಎಂದರು.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.