ಪೊಲೀಸರಿಗೆ ವೆಪರೈಜರ್‌ಗಳ ವಿತರಣೆ

ಕೋಲಾರ,ಏ.೨೮ – ನಗರ ವ್ಯಾಪ್ತಿಯ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಸಿಬ್ಬಂದಿಗಳ ಉತ್ತಮ ಆರೋಗ್ಯಕ್ಕಾಗಿ ೨೫ ವೆಪರೈಜರ್‌ಗಳನ್ನು ವಿತರಣೆ ಮಾಡಿದರು. ಶ್ರೀ ಪುಟ್ಟಪರ್ತಿ ಸಾಯಿಬಾಬಾರವರ ೧೦ನೇ ಆರಾಧನಾ ಮಹೋತ್ಸವದ ಪ್ರಯುಕ್ತ, ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ ವತಿಯಿಂದ ಹಾಗೂ ಸತ್ಯಸಾಯಿ ಶಾಲೆಯ ಹಳೇಯ ವಿದ್ಯಾರ್ಥಿ ಜಿ.ಪಿ ಕಮಲಾಕ್ಷ ರವರು ಕೋಲಾರ ನಗರದ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರಕ್ಷಕರಿಗೆ ವೆಪರೈಜರ್‍ಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ವಿಶ್ವದಾದ್ಯಂತ ಕೊರೋನಾ ಮಹಾಮಾರಿ ವ್ಯಾಪಿಸಿದ್ದು, ತಮ್ಮ ಜೀವನವನ್ನೇ ಲೆಕ್ಕಿಸದೆ ಹಗಲು ರಾತ್ರಿ ನಮಗಾಗಿ ದುಡಿಯುವ ನಮ್ಮ ಆರಕ್ಷಕರಿಗೆ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ ವತಿಯಿಂದ ವೆಪರೈಜರ್‍ಗಳನ್ನು ನೀಡಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ತಮ್ಮ ಕುಟುಂಬದ ರಕ್ಷಣೆಯನ್ನು ಲೆಕ್ಕಿಸದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಾರ್ವಜನಿಕರ ಅಮೂಲ್ಯವಾದ ಜೀವಕ್ಕೆ ಯಾವುದೇ ತೊಂದೆಯಾಗದಂತೆ ತಮ್ಮ ಸೇವೆಯನ್ನು ಮುಂದುವರೆಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಪಿ.ಶಿವಕುಮಾರ್, ಸದಸ್ಯರಾದ ಮಂಜುನಾಥ್, ಚೇತನ್‌ಬಾಬು ಉಪಸ್ಥಿತರಿದ್ದರು.