ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾದ ಆರೋಪಿ

ಕಲಬುರಗಿ,ಸೆ.24-ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲೆಂದು ಕರೆದುಕೊಂಡು ಹೋಗುತ್ತಿದ್ದಾಗ ಆರೋಪಿಯೊಬ್ಬ ಬಾಯಾರಿಕೆಯಾಗಿದೆ ಎಂದು ಹೇಳಿ ನೀರಿನ ಬಾಟಲ್ ತರಲು ಹೋಗಿ ಪೊಲೀಸರಿಂದ ತಪ್ಪಿಸಿಕಿಕೊಂಡು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಸಾವಳಗಿ (ಬಿ) ಗ್ರಾಮದ ಬಸವರಾಜ ಜಮಾದಾರ (31) ಎಂಬಾತನೆ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದಾನೆ.
ಸಾವಳಗಿ (ಬಿ) ಗ್ರಾಮದಲ್ಲಿ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ದು ಅಸಭ್ಯರೀತಿಯಲ್ಲಿ ವರ್ತಿಸುತ್ತಿದ್ದ ಆರೋಪದ ಮೇಲೆ ಬಸವರಾಜ ಜಮಾದಾರನನ್ನು ಸ್ಟೇಷನ್ ಬಜಾರ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸಿಬ್ಬಂದಿಗಳಾದ ಶಿವರಾಜ ದೇವರಗುಡಿ ಮತ್ತು ಚಂದ್ರವಧನ ಅವರು ಆರೋಪಿ ಬಸವರಾಜ ಜಮಾದಾರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲೆಂದು ಕರೆದೊಯ್ಯುತ್ತಿದ್ದಾಗ ಹಳೆ ಜೇವರ್ಗಿ ರಸ್ತೆಯ ದಂಡಗುಂಡ ಬಸವೇಶ್ವರ ಹೋಟೆಲ್ ಹತ್ತಿರ ಆರೋಪಿ ಬಾಯಾರಿಕೆಯಾಗಿದೆ ಕುಡಿಯುವ ನೀರಿನ ಬಾಟಲ್ ತರುವೆ ಎಂದು ಹೇಳಿ ತಪ್ಪಿಸಿಕೊಂಡು ಕೇಂದ್ರ ಬಸ್ ನಿಲ್ದಾಣ ರಸ್ತೆ ಕಡೆಗೆ ಓಡಿ ಹೋಗಿದ್ದಾನೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.