ಪೊಲೀಸರಿಗೆ ಕಾನೂನು ಅರಿವು ಕಾರ್ಯಾಗಾರ

ಕೆಜಿಎಫ್., ನ.೨೫-ಕೋಲಾರ ಚಿನ್ನದ ಗಣಿ ಪ್ರದೇಶದ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ ಕಾನೂನು ಅರಿವು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಮಾಲಗತ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಹಿಳೆಯರ ಮತ್ತು ಮಕ್ಕಳ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಡೆಯುತ್ತಿರುವ ಅಥವಾ ನಡೆಯುವ ದೌರ್ಜನ್ಯಗಳ ತಡೆ ಕುರಿತು ಈ ತರಬೇತಿಯು ಬಹಳ ಉಪಯುಕ್ತವಾಗಿದೆ.
ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಇರುವ ಮಹಿಳೆಯರು ಮತ್ತು ಮಕ್ಕಳನ್ನು ದೌರ್ಜನ್ಯಗಳಿಂದ ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಇಡೀ ಸಮಾಜವು ಸಹಕರಿಸಬೇಕಾಗಿದೆ. ಈ ರೀತಿಯ ದೌರ್ಜನ್ಯ ತಡೆಗೆ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಹಕರಿಸಬೇಕೆಂದು ಎಸ್‌ಪಿ ಡಾ|| ಕೆ.ಧರಣೀದೇವಿ ಮಾಲಗತ್ತಿ ಅವರು ಕರೆ ನೀಡಿದರು.
ಡಿವೈಎಸ್ಪಿ ವಿ.ಎಲ್.ರಮೇಶ್ ಅವರು ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಮತ್ತು ನಡೆಯಬಹುದಾದ ದೌರ್ಜನ್ಯಗಳ ಕುರಿತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ, ಸಮನ್ವಯತೆಯಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತು ಸಮಯದಾಯದಲ್ಲಿ ಮತ್ತು ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳು, ಕಾನೂನುಗಳ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಸಂರಕ್ಷಣೆಯ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪೊಲೀಸ್ ಇನ್ಸ್‌ಪೆಕ್ಟರ್ ಗೋವರ್ಧನ್, ಆರ್.ದಯಾನಂದ ಮತ್ತು ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಅಪರಾಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.