ಪೊಲೀಸರತ್ತ ಗುಂಡು ಹಾರಾಟ ಪ್ರಕರಣ: ಮತ್ತೆ ನಾಲ್ವರ ಬಂಧನ

ಬಂಟ್ವಾಳ, ಎ.೬- ಕೇರಳ ಮತ್ತು ಕರ್ನಾಟಕ ಪೊಲೀಸರತ್ತ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಕುಖ್ಯಾತ ‘ಡಿ ಗ್ಯಾಂಗ್’ನ ಪ್ರಮುಖ ಸೇರಿ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಡಿ ಗ್ಯಾಂಗ್ ನ ಮುಖ್ಯಸ್ಥ ಎಂದು ಗುರುತಿಸಿಕೊಂಡಿರುವ ಕೇರಳ ಕಾಸರಗೋಡು ಜಿಲ್ಲೆಯ ಮೀಯಪದವು ಮೂಡಂಬೈಲು ನಿವಾಸಿ ಅಬ್ದುಲ್ ರಹ್ಮಾನ್ ಯಾನೆ ರಹೀಂ(25), ಮಹಾರಾಷ್ಟ್ರ ಜಲಗಾವ್ ಮುಕುಂದ ನಗರ ನಿವಾಸಿ ರಾಕೇಶ್ ಕಿಶೋರ್ ಬಾವಿಸ್ಕರ್ ಯಾನೆ ರಾಕಿ (27), ಡಿ ಗ್ಯಾಂಗ್ ಸದಸ್ಯರಾದ ಕಡಂಬಾರು ಬಟ್ಯಪದವು ನಿವಾಸಿ ಮುಹಮ್ಮದ್ ಫಯಾಝ್ ಯಾನೆ ಕೂವ ಫಯಾಝ್ (22), ಮಂಗಲ್ಪಾಡಿ ಸೋಂಕಾಳ್ ನಿವಾಸಿ ಹೈದರ್ ಅಲಿ ಯಾನೆ ಹೈದರ್(20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಮೂರು 7.65 ಎಂಎಂ ಪಿಸ್ತೂಲ್, ಒಂದು ನಾಡ ಕೋವಿ, 13 ಸಜೀವ ಮದ್ದುಗುಂಡು, 1 ಕಾರು ಅನ್ನು ವಶ ಪಡೆದು ಕೊಳ್ಳಲಾಗಿದೆ. ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ವಿವರ ನೀಡಿದ್ದಾರೆ. ಆರೋಪಿ ಫಯಾಝ್ ವಿರುದ್ಧ ಕೇರಳದ ಮಂಜೇಶ್ವರ ಠಾಣೆಯಲ್ಲಿ ಹಲ್ಲೆ, ದೊಂಬಿ, ಕೊಲೆಯತ್ನ, ಅಕ್ರಮ ಅಯುಧ ಬಳಕೆ, ಕುಂಬಳೆಯಲ್ಲಿ ಕೊಲೆಯತ್ನ, ಆಂದ್ರ ಪ್ರದೇಶದಲ್ಲಿ ಗಾಂಜಾ ಪ್ರಕರಣ ಸೇರಿ 11 ಪ್ರಕರಣಗಳು ಇವೆ. ಈತ ಹೊರ ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ. ರಹೀಂ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಬಳಕೆ, ಗಾಂಜಾ, ಕೊಲೆ ಯತ್ನ, ಅಪಹರಣ, ಚಿಕ್ಕಂಗಳೂರು ಠಾಣೆಯಲ್ಲಿ ಗಾಂಜಾ ಪ್ರಕರಣ ಸೇರಿ 11 ಪ್ರಕರಣಗಳು ಇವೆ ಎಂದು ಪೊಲೀಸರು ಮಾಹಿತಿ ನೀಡಿದರು. ಮಾ.25ರಂದು ರಾತ್ರಿ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಕ್ಲಬ್ ಒಂದರಲ್ಲಿ ಮತ್ತೊಂದು ತಂಡದೊಂದಿಗೆ ಕಾಳಗ ನಡೆಸಿದ ಕುಖ್ಯಾತ ಡಿ ಗ್ಯಾಂಗ್ ನ ಸದಸ್ಯರು ಕ್ಲಬ್ ನಲ್ಲಿ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದರು. ಇವರನ್ನು ಬೆನ್ನತ್ತಿದ್ದ ಕೇರಳ ಪೊಲೀಸರತ್ತವೂ ಗುಂಡು ಹಾರಿಸಿ ಕರ್ನಾಟಕ ಗಡಿಯಾದ ವಿಟ್ಲಕ್ಕೆ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಚರಣೆ ನಡೆಸಿದಾಗ ವಿಟ್ಲ ಪೊಲೀಸರ ಮೇಲೂ ಗುಂಡು ಹಾರಿಸಿದ್ದರು.

ಕಾರ್ಯಚರಣೆಯಲ್ಲಿ ಮಂಜೇಶ್ವರ ಮಂಗಲ್ಪಾಡಿ ಬೈತಿಲ ನಿವಾಸಿ ಅಬ್ದುಲ್ ಲತೀಫ್ ಯಾನೆ ಲತ್ತಿ ಯಾನೆ ಲತೀಫ್(23), ಮೀಂಜ ಮೀಯಪದವು ಬೆಚ್ಚಂಗಳ ನಿವಾಸಿ ಮಹಮ್ಮದ್ ಶಾಕೀರ್ ಯಾನೆ ಶಾಕೀರ್ (26), ಮೂಡಂಬೈಲು ಅಡ್ಕಂತಗುರಿ ನಿವಾಸಿ ಮಹಮ್ಮದ್ ಅಶ್ವಕ್ ಯಾನೆ ಅಸ್ಫಾಕ್ (25) ಬಂಧಿಸಿದ್ದರು. ಈ ವೇಳೆ ಇಬ್ಬರು ಪರಾರಿಯಾಗಿದ್ದರು. ಅಂದು ಬಂಧಿತರಿಂದ ಒಂದು ಕಾರು, ಒಂದು ಪಿಸ್ತೂಲ್, 13 ಸಜೀವ ಗುಂಡು, 1 ಡ್ರಾಗನ್, 1 ಕೊಡಲಿ, 1 ಚೂರಿ, ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲೈಂಟೈನ್ ಡಿಸೋಜ್ ಅವರ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಉಪ ನಿರೀಕ್ಷಕ ವಿನೋದ್ ರೆಡ್ಡಿ, ಎಎಸ್ಸೈ ಕರುಣಾಕರ್, ಸಿಬ್ಬಂದಿ ಪ್ರಸನ್ನ, ಗಿರೀಶ್, ಪ್ರತಾಪ, ವಿನಾಯಕ, ಲೋಕೇಶ್, ಹೇಮರಾಜ್, ನಝೀರ್, ವಿವೇಕ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.