ಪೈಪ್‌ಲೈನ್ ದುರಸ್ತಿಗೊಳಿಸದಿದ್ದರೆ ಅಧಿಕಾರಿಗಳಿಗೆ ಅದೇ ನೀರು; ಸಿಇಒ ಬಿ.ಸದಾಶಿವ ಪ್ರಭು ಎಚ್ಚರಿಕೆ

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜು.೨೭: ಜೆಜೆಎಂ ಕಾಮಗಾರಿ ನಡೆಯುವಾಗ ಈ ಹಿಂದೆ ಹಾಕಿದ್ದ ಪೈಪ್‌ಗಳು ಹೊಡೆದಿದ್ದರೂ ಅದನ್ನು ಸರಿಪಡಿಸದಿದ್ದರೆ ಅದೇ ಕಲುಷಿತ ನೀರನ್ನು ಅಲ್ಲಿನ ಸೆಕ್ಟರ್ ಅಧಿಕಾರಿಗಳಿಗೆ ಕುಡಿಸುತ್ತೇವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು ಅವರು ಖಡಕ್ಕಾಗಿ ಎಚ್ಚರಿಸಿದರು.ಇಲ್ಲಿನ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಕುರಿತು ತುರ್ತು ಸಭೆಯಲ್ಲಿ ಮಾತನಾಡಿದರು.ನನ್ನ ಮಗನನ್ನು ಕಾಲೇಜಿಗೆ ಅಡ್ಮಿಶನ್ ಮಾಡಿಸಲು ಶುಕ್ರವಾರ ಊರಿಗೆ ಹೋಗಿದ್ದೆ. ಆದರೆ, ನಂದಿಬೇವೂರು ಗ್ರಾಪಂ ವ್ಯಾಪ್ತಿಯ ಕಣಿವಿಹಳ್ಳಿಯಲ್ಲಿ ಜನರಿಗೆ ವಾಂತಿ-ಭೇದಿ ಆಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಅವರಿಂದ ಮೆಸೆಜ್ ಬಂದ ತಕ್ಷಣ ನನಗೆ ತಡೆಯಲು ಆಗಲಿಲ್ಲ. ಕೂಡಲೇ ತಾಪಂ ಇಒ ಹಾಗೂ ಜಿಪಂನ ಯೋಜನಾ ನಿರ್ದೇಶಕರಿಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೆ. ನಂತರ ವಾಂತಿ-ಭೇದಿ ಪ್ರಕರಣದಲ್ಲಿ ಒಬ್ಬರಿಗೆ ತೀರಾ ಆರೋಗ್ಯ ಹದಗೆಟ್ಟಿತ್ತು. ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ಸಿಇಒರೊಂದಿಗೆ ನಿರಂತರ ಫಾಲೋಅಪ್ ಮಾಡಿದೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ. ಆದರೂ ಸ್ಥಳ ಪರಿಶೀಲನೆ ಮಾಡುವ ತನಕ ನನಗೆ ಸಮಾಧಾನ ಆಗಲಿಲ್ಲ. ನನ್ನ ತಾಯಿ ಹಾಸಿಗೆ ಹಿಡಿದಿದ್ದರೂ ಅವರನ್ನು ನೋಡಲು ಒಂದು ದಿನ ಸಿಗಲಿಲ್ಲ ಎಂದು ಭಾವುಕರಾದ ಸಿಇಒ, ರಜೆಯಲ್ಲಿದ್ದೇನೆಂದು ನಾನು ಮೊಬೈಲ್ ಸ್ವಿಚ್‌ಅಫ್ ಮಾಡಿದ್ದರೆ ಇಲ್ಲಿನ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಊಹಿಸಿಕೊಳ್ಳಿ. ಆದ್ದರಿಂದ ಭಾನುವಾರ ಸೇರಿ ರಜಾದಿನಗಳಲ್ಲಿಯೂ ಸಾರ್ವಜನಿಕರು ಫೋನ್ ಮಾಡಿದರೆ ಅಧಿಕಾರಿಗಳು ಸ್ವೀಕರಿಸಬೇಕು. ಸಮಸ್ಯೆ ಏನೆಂದು ಆಲಿಸಿ. ಅದನ್ನು ಬಗೆಹರಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ಅಪಾಯ ನಮ್ಮ ಕಾಲಬುಡದಲ್ಲೇ ಇರುತ್ತದೆ. ಅದನ್ನು ಕೈಗೆ ಎತ್ತಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಹೇಳಿದರು.ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿದ್ದರೆ ಅದನ್ನು ಗ್ರಾಪಂ ಪಿಡಿಒ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಅಲ್ಲಿ ಏನಾದರೂ ಸಮಸ್ಯೆಗಳು ಉಲ್ಬಣಿಸಿದರೆ ಕಾಮಗಾರಿ ಅನುಷ್ಠಾನ ಮಾಡುವವರೇ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಎಸ್‌ಬಿಎಂ ಸಹಾಯಕ ನಿರ್ದೇಶಕ ಲಕ್ಷಿö್ಮÃಕಾಂತ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್, ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ಪಿಆರ್‌ಇಡಿ ಎಇಇ ನಾಗಪ್ಪ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಟಿಪಿಒ ನವೀನ್‌ಕುಮಾರ್, ಆರ್‌ಡಬ್ಲ್ಯುಎಸ್ ಇಂಜಿನಿಯರ್‌ಗಳು, ಜೆಜೆಎಂನ ವಿವಿಧ ವಿಭಾಗದ ಅಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.