ಪೇಸಿಎಂ ಪೋಸ್ಟರ್ ಸಿಎಂಗೆ ಗಾಬರಿ ಏಕೆ ಡಿಕೆಶಿ ಪ್ರಶ್ನೆ

ಬೆಂಗಳೂರು, ಸೆ.೨೨-ರಾಜ್ಯದಲ್ಲಿ ಶೇ. ೪೦ರಷ್ಟು ಕಮಿಷನ್ ಸರ್ಕಾರ ಎಂದು ನಾವೆಲ್ಲ ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದು ಅಧಿಕಾರದಲ್ಲಿ ಇರುವವರು ಇದನ್ನು ಅರಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆ ಕೆಡಿಸಿಕೊಂಡು ಗಾಬರಿಯಾಗಿ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡ್ತಿದ್ದೇವೆ.ಶೇ. ೪೦ರಷ್ಟು ಕಮಿಷನ್ ಸರ್ಕಾರ ಎಂದು ನಾವೆಲ್ಲ ಪ್ರಚಾರ ಮಾಡಿದ್ದೆವು ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಂಟಿಸಿದ್ದೇವೆ. ಇದು ಸತ್ಯ. ಪೇಸಿಎಂನ್ನು ೧.೯ ಲಕ್ಷ ಜನ ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ೮ ಸಾವಿರ ದೂರು ದಾಖಲಾಗಿದೆ. ಇದು ರಾಜಕಾರಣದ ವ್ಯವಸ್ಥೆ. ನನ್ನ ಸಿದ್ದರಾಮಯ್ಯ ಫೋಟೋ ಕೂಡ ಅವರು ಪೋಸ್ಟರ್ ಮಾಡಿದ್ದಾರೆ ಎಂದರು.
ಈ ಬಗ್ಗೆ ಮುಖ್ಯಮಂತ್ರಿಗಳು ಏಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ನಾಳೆ ಕಾಂಗ್ರೆಸ್‌ನ ಎಲ್ಲ ಎಂಎಲ್ಸಿ, ಎಂಎಲ್‌ಎಗಳು, ನಾವೇ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ. ಸರ್ಕಾರಿ ಕಟ್ಟಡಗಳ ಮೇಲೆ ಪೋಸ್ಟರ್ ಅಂಟಿಸುತ್ತೇವೆ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದ ಅವರು, ಬಿಜೆಪಿ ಅಧಿಕಾರ ದುರ್ಬಳಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಅವರು ನಮ್ಮ ಬಗ್ಗೆಯೂ ಕ್ಯೂಆರ್ ಕೋಡ್ ಹಾಕಿದ್ದಾರೆ. ನಾನು ವಿಚಾರಣೆಗೆ ಹೋದ ಸಮಯದಲ್ಲಿ ನಾನು ಕಂಬಿ ಹಿಂದೆ ಇರುವಂತೆ ಮಾಧ್ಯಮಗಳು ಫೋಟೋ ಹಾಕಿದ್ದರು. ಹಾಗೆಂದು ನಾನು ಅವರ ವಿರುದ್ಧ ದೂರು ನೀಡಲು ಸಾಧ್ಯವೇ?
ರಾಜಕೀಯದಲ್ಲಿ ಇರುವವರನ್ನು ಜನ ಪ್ರಶ್ನಿಸುವುದು, ಟೀಕಿಸುವುದು ಸಹಜ. ಅಧಿಕಾರದಲ್ಲಿ ಇರುವವರು ಇದನ್ನು ಜೀರ್ಣಿಸಿಕೊಳ್ಳಬೇಕು.ರಾತ್ರೋ ರಾತ್ರಿ ಬಂಧಿಸಿರುವುದನ್ನು ಖಂಡಿಸುತ್ತೇನೆ ಎಂದರು.
ಇದು ಅಧಿಕಾರ ದುರ್ಬಳಕೆಯೇ ಎಂದು ಕೇಳಿದ ಪ್ರಶ್ನೆಗೆ,ಇದು ಅಧಿಕಾರ ದುರ್ಬಳಕೆ, ಭಯ, ದ್ವೇಷದ ರಾಜಕಾರಣವಾಗಿದೆ. ೪೦ ಕಮಿಷನ್ ಆರೋಪ ನಾವು ಮಾಡಿದ್ದೇವಾ? ಸಿಎಂ ಹುದ್ದೆಗೆ ೨೫೦೦ ಕೋಟಿ ನೀಡಬೇಕು ಎಂದು ನಾವು ಹೇಳಿದ್ದೇವಾ? ನಿಮ್ಮ ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಹಗರಣದ ಬಗ್ಗೆ ಮಾತನಾಡಿದ ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಮನ್ಸ್ ನೀಡುವ ಸರ್ಕಾರ ಯತ್ನಾಳ್, ವಿಶ್ವನಾಥ್, ಮಠದ ಸ್ವಾಮೀಜಿಗಳಿಗೆ ಸಮನ್ಸ್ ನೀಡಿಲ್ಲ ಯಾಕೆ? ವಿಧಾನಸೌಧದ ಮುಂದೆ ಗುತ್ತಿಗೆದಾರರ ಸಂಘದವರು ಆರೋಪ ಮಾಡಿದಾಗ ಯಾಕೆ ಕೇಸ್ ಹಾಕಲಿಲ್ಲ. ಈ ವಿಚಾರ ಜನರ ಬಾಯಲ್ಲಿ ಹರಿದಾಡುತ್ತಿದೆ. ನೀವು ನಮ್ಮ ಮೇಲೂ ಆರೋಪ ಮಾಡಿದ್ದೀರಿ. ತನಿಖೆ ಮಾಡಿ, ನಾವು ಅದನ್ನು ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು. ಬಿಬಿಎಂಪಿಯವರಿಗೆ ಕಣ್ಣಿಲ್ವಾ ಎಂದ ಅವರು, ಜನೋತ್ಸವದ್ದು ಅಷ್ಟೊಂದು ಪೋಸ್ಟರ್ ಹಾಕಿಲ್ವಾ? ಅದಕ್ಕೂ ಬಿಬಿಎಂಪಿ ಏಕೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು.