ಕಲಬುರಗಿ,ಜೂ 20: ಮರಳು ದಂಧೆಕೋರರಿಂದ ಇತ್ತೀಚೆಗೆ ಹತ್ಯೆಗೀಡಾದ ಪೆÇಲೀಸ್ ಪೇದೆ ಮಯೂರ್ ಚವ್ಹಾಣ್ ಅವರ ಚೌಡಾಪುರ ತಾಂಡಾ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮೃತ ಮಯೂರ್ ಅವರ ಪತ್ನಿ ನಿರ್ಮಲಾ ಹಾಗೂ ಹಿರಿಯ ಪುತ್ರ ಮಹೇಶ್ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಸಚಿವ ಪ್ರಿಯಾಂಕ್, ಕಾಂಗ್ರೆಸ್ ಪಕ್ಷದ ವತಿಯಿಂದ ರೂ.1 ಲಕ್ಷದ ಪರಿಹಾರ ಚೆಕ್ ನೀಡಿದರು.
ಸಂತ್ರಸ್ತ ಕುಟುಂಬದೊಂದಿಗೆ ರಾಜ್ಯ ಸರಕಾರವಿದ್ದು, ನೊಂದ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ನೀಡಲು ಬದ್ಧ ಎಂದರು.
ಇದೇವೇಳೆ, ಕುಟುಂಬದ ಓರ್ವ ಅರ್ಹ ಮತ್ತು ವಿದ್ಯಾವಂತ ವ್ಯಕ್ತಿಗೆ ಸರಕಾರಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ್, ಜಗದೇವ್ ಗುತ್ತೇದಾರ್, ಜೆ.ಎಂ.ಕೊರಬು, ಪಪ್ಪು ಪಟೇಲ್, ಎಸ್ಪಿ ಇಶಾ ಪಂತ್, ಅಫಜಲಪುರ ತಹಸೀಲ್ದಾರ್ ಸಂಜೀವ್ ಕುಮಾರ್ ದಾಸರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೂರು ತಿಂಗಳಲ್ಲಿ ಎಲ್ಲಾ ಕ್ಲೀನ್
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ವ್ಯವಸ್ಥೆ ಕಿಲುಬು ಹಿಡಿದಿತ್ತು. ಅಧಿಕಾರಿಗಳು ಮೈಗೆ ಎಣ್ಣೆ ಹಚ್ಚಿಕೊಂಡು ಕೆಲಸ ಮಾಡಿದ್ದು ಚೆನ್ನಾಗಿ ಗೊತ್ತಿದೆ. ಇದೇ ಜೂನ್ 30ರೊಳಗೆ ಇಂತಹ ಎಲ್ಲ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ಮಯೂರ್ ಚವ್ಹಾಣ್ ಕುಟುಂಬಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿರುವ ಕೆಟ್ಟ ವ್ಯವಸ್ಥೆ ಸರಿ ಹಾದಿಗೆ ತರಲಾಗುವುದು. ಆ ಬಳಿಕ ಎಲ್ಲವೂ ಕ್ಲೀನ್ ಆಗಲಿದೆ ಎಂದರು.ಪೇದೆ ಮಯೂರ್ ಪ್ರಕರಣ ಒಂದು ವಿಷಾದನೀಯ. ಇಂತಹ ಘಟನೆಗಳ ಹಿಂದೆ ಸಾಮಾನ್ಯವಾಗಿ ಕಂದಾಯ, ಗೃಹ ಸೇರಿದಂತೆ ಇಲಾಖೆಯ ಕೆಲವರ ಪಾತ್ರವಿರುತ್ತದೆ. ಮೇಲಾಗಿ, ಕೆಲವು ರಾಜಕಾರಣಿಗಳ ಕುಮ್ಮಕ್ಕು ಸಹ ಇರುತ್ತದೆ. ಎಲ್ಲವೂ ಈಗ ನಡೆಯುತ್ತಿರುವ ತನಿಖೆಯಿಂದ ಹೊರಬರಲಿದೆ ಎಂದರು.ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಕೆಲಸ ಮಾಡಿದ ಅಧಿಕಾರಿಗಳಿಗೆ ಕಾನೂನಿನ ಬಗ್ಗೆಯಾಗಲಿ, ಸಂವಿಧಾನದ ಕುರಿತಾಗಲಿ ಭಯ ಇರಲಿಲ್ಲ. ಅಂತಹ ಎಲ್ಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗುತ್ತಿದೆ. ಈಗಾಗಲೇ ಕೆಲವು ಅಧಿಕಾರಿಗಳು ಜಿಲ್ಲೆಯಿಂದ ವರ್ಗಾವಣೆ ಮಾಡಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಅವರು ಎಲ್ಲಿಯೇ ಹೋದರೂ ನಮ್ಮ ಸರಕಾರದ ಅಧೀನದಲ್ಲಿಯೇ ಕೆಲಸ ಮಾಡಬೇಕು ಎಂಬುದನ್ನು ನೆನಪಿಡಬೇಕು ಎಂದು ಸಚಿವ ಪ್ರಿಯಾಂಕ್ ಎಚ್ಚರಿಕೆ ನೀಡಿದರು.ಮಯೂರ್ ಚವ್ಹಾಣ್ ದುರಂತ ಸಾವು ಕುರಿತಂತೆ ಪ್ರಸ್ತಾಪಿಸಿದ ಅವರು, ಕೊಲೆ ಮಾಡಿದವನು ಬಿಜೆಪಿ ಕಾರ್ಯಕರ್ತ ಎಂಬುದು ಈಗಾಗಲೇ ಗೊತ್ತಾಗಿದೆ. ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಮ್ಮ ಸ್ಪಷ್ಟೀಕರಣ ನೀಡಬೇಕು ಎಂದು ಪ್ರಿಯಾಂಕ್ ಸವಾಲು ಹಾಕಿದರು.