ಪೇದೆಗೆ ಚಾಕುವಿನಿಂದ ಇರಿದಿದ್ದ ಕಳ್ಳನಿಗೆ ಗುಂಡೇಟು

ಬೆಂಗಳೂರು,ಜ.9-ಬಂಧಿಸಲು ಹೋದ‌ ವರ್ತೂರು ಪೊಲೀಸ್ ಪೇದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಕುಖ್ಯಾತ ಕಳ್ಳನಿಗೆ ವರ್ತೂರು ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಗುಂಡೇಟು ತಿಂದ ನವೀನ್ (20)ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳ್ಳತನ ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ ನವೀನ್​​ನನ್ನು ಬಂಧಿಸಲು ಪಿಎಸ್ಐ ಕೃಷ್ಣಮೂರ್ತಿ ನೇತೃತ್ವದ ತಂಡ ತೆರಳಿತ್ತು. ನವೀನ್ ಹೆಡ್​ ಕಾನ್ಸ್​ಟೇಬಲ್​​ ಮಂಜುನಾಥ್ ಕೈಗೆ ಚಾಕುವಿನಿಂದ ಇರಿದು ಉಳಿದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ‌.
ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಪಿಎಸ್ಐ ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆರೋಪಿ ನವೀನ್ ಬಲಗಾಲಿಗೆ ಗುಂಡು ಹಾರಿಸಿದ್ದು ಕುಸಿದು ಬಿದ್ದ ಆತನನ್ನು ಬಂಧಿಸಲಾಗಿದೆ.
ಕುಟುಂಬದರಿಂದ ಹಲ್ಲೆ:
ಕಳೆದ ಜ.6ರಂದು ವರ್ತೂರಿನ ಕಾಚಮಾರನಹಳ್ಳಿಯಲ್ಲಿರುವ ಮನೆಗೆ ನವೀನ್​​ನನ್ನು ಬಂಧಿಸಲು ತೆರಳಿದ್ದಾಗ ಆತನ ತಾಯಿ ನರಸಮ್ಮ, ಅಣ್ಣ ಮುರುಗೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಆರೋಪಿ ತಪ್ಪಿಸಿಕೊಳ್ಳಲು ಸಹಕರಿಸಿದ್ದರು. ಈ‌ ಘಟನೆ ಸಂಬಂಧ ಇಬ್ಬರನ್ನು ವರ್ತೂರು ಪೊಲೀಸರು ಬಂಧಿಸಿದ್ದರು.
ಆರೋಪಿ ನವೀನ್ ವಿರುದ್ಧ ಕೆ.ಆರ್‌.ಪುರ, ಪರಪ್ಪನ ಅಗ್ರಹಾರ, ಬೆಳ್ಳಂದೂರು ವರ್ತೂರು ಪೊಲೀಸ್ ಠಾಣೆಗಳಲ್ಲಿ ವಿವಿಧ ಅಪರಾಧ ಪ್ರಕರಣ ದಾಖಲಾಗಿವೆ.
ಹಲವು ತಿಂಗಳಿಂದ ಪೊಲೀಸರಿಗೆ ಸಿಗದೆ‌ ನಗರದಲ್ಲಿ‌ ಓಡಾಡಿಕೊಂಡಿದ್ದ ಆತ ಹೆಗ್ಗೊಂಡಹಳ್ಳಿಯ ಗುಂಜೂರಿನಲ್ಲಿ ಅಡಗಿದ್ದ ಮಾಹಿತಿ ಆಧರಿಸಿ ಇಂದು ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.