
ಯಾದಗಿರಿ : ಮೇ 17 : ಪೆÇೀಷಕರಿಗೆ ಒಳ್ಳೆಯ ಹೆಸರು ತರುವ ಛಲ ನಿಮ್ಮಲಿರಲಿ,ನಿಮ್ಮ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ನಿಮ್ಮ ಗುರಿ ದೊಡ್ಡದಾಗಿರಬೇಕು, ಈ ನಾಡಿಗೆ ಒಳ್ಳೆಯ ಪ್ರಜೆಗಳಾಗಿ ದೇಶ ಕಟ್ಟುವುದಕ್ಕೆ ತಾವೆಲ್ಲರೂ ಕೈ ಜೋಡಿಸುವಂತಹ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ 2023 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಹೇಳ್ತಾರೆ ಆದರೆ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಇರುವಾಗ ಜಿಲ್ಲೆ ಹಿಂದುಳಿಯಲು ಹೇಗೆ ಸಾಧ್ಯವಾಗುತ್ತದೆ. ನೀವೆಲ್ಲರೂ ಒಳ್ಳೆಯ ವಿದ್ಯಾಭ್ಯಾಸಮಾಡಿ ಜಿಲ್ಲೆಯನ್ನು ಉನ್ನತ ಸ್ಥಾನಕ್ಕೇರಲು ನಿಮ್ಮದೇ ಕೊಡುಗೆ ನೀಡಬೇಕು ಎಂದರು.
ನೀವು ದೇಶದ ಭವಿಷ್ಯವನ್ನು ರೂಪಿಸುವ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಲು ನಿಮಗೆ ಹಕ್ಕು ಇದೆ. ಗುರಿ ಸಾಧನೆಗೆ ನಿರಂತರ ಪ್ರಯತ್ನ, ಕಠಿಣ ಪರಿಶ್ರಮವು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವೈಯಕ್ತಿಕ ಸಾಧನೆ ಮತ್ತು ರಾಷ್ಟ್ರದ ಬೆಳವಣಿಗೆ ಅತ್ಯಂತ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಪನ್ವಾರ್ ಮಾತನಾಡಿ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಜೀವನದ ಪ್ರಮುಖ ಘಟ್ಟವಾಗಿದೆ. ಮಾಜಿ ರಾಷ್ಟಪತಿ ಅಬ್ದುಲ್ ಕಲಾಂ ಅವರು ಹೇಳುವಂತೆ ನಿದ್ದೆಯಲ್ಲಿ ಕಾಣುವ ಕನಸು ಕನಸಲ್ಲ, ನಿದ್ದೆಯನ್ನೇ ಕೆಡಿಸುವ ಕನಸೇ ಕನಸಾಗಿದ್ದು, ನಿಮ್ಮ ಕನಸು ದೊಡ್ಡದಾಗಿರಬೇಕು. ಹೆಚ್ಚು ಪರಿಶ್ರಮ, ಶಿಸ್ತು, ಸಮಯಪಾಲನೆ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಸಲಹೆ ನೀಡಿದ ಅವರು ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನೀವು ಹುಡುಕಿಕೊಂಡು ಹೋಗಬೇಕು ಎಂದರು.
ಎಸ್.ಎಸ್.ಎಲ್.ಸಿ ಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ವಡಿಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ 625 ಕ್ಕೆ 620 ಅಂಕ ಪ್ರತಿಶತ 99.20, ಶಹಾಪುರ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯರಾದ ಲಕ್ಷ್ಮೀ ಜವಳಿ 620 ಅಂಕ ಪ್ರತಿಶತ 99.20, ನೇಹಾ 617 ಅಂಕ ಪ್ರತಿಶತ 98.72, ಸುರಪುರ ತಾಲೂಕಿನ ಕವಡಿಮಟ್ಟಿ ಅಕ್ಷರ ಪಬ್ಲಿಕ್ ವಿದ್ಯಾಲಯದ ವಿದ್ಯಾರ್ಥಿನಿ ಭೂಮಿ ಜೈನ್ 617 ಅಂಕ ಪ್ರತಿಶತ 98.72, ಶಹಾಪುರ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ರಕ್ಷಿತಾ ಪಾಂಚಾಳ 616 ಅಂಕ ಪ್ರತಿಶತ 98.56, ಶಹಾಪುರ ತಾಲೂಕಿನ ಗೋಗಿ ಕೆ ಶರಣಪ್ಪ ಮಾನು ಕರ್ಮಯೋಗಿ ಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ 616 ಅಂಕ ಪ್ರತಿಶತ 98.56
ಪಿಯುಸಿ ಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಗುರುಮಿಠಕಲ್ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿ ಹಣಮಂತು 600 ಕ್ಕೆ 577 ಅಂಕ ಪ್ರತಿಶತ 96.17, ಯಾದಗಿರಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿ ನಾಗಮ್ಮ 569 ಅಂಕ ಪ್ರತಿಶತ 94.83, ಯಾದಗಿರಿಯ ಸಹ್ಯಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿ ಅಭಿಷೇಕ 588 ಅಂಕ ಪ್ರತಿಶತ 98, ಶಹಾಪುರಿನ ಎಮ್.ವಿ ಸಾಯಿರಾಮ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಬಿ.ಎಮ್. 588 ಅಂಕ ಪ್ರತಿಶತ 98, ಶಹಾಪುರ ತಾಲೂಕಿನ ದೋರನಹಳ್ಳಿಯ ಡಿ ದೇವರಾಜ್ ಅರಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ 564 ಅಂಕ ಪ್ರತಿಶತ 94, ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ನಾಗರಾಜ 546 ಅಂಕ ಪ್ರತಿಶತ 91 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಡಿಡಿಪಿಐ ಸುರೇಶ ಹುಗ್ಗಿ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಯಾದಗಿರಿ ಬಿಇಓ ಅಮೃತಾಬಾಯಿ ಜಾಗೀರದಾರ, ಸುರಪುರ ಬಿಇಓ ಪಂಡಿತ್ ನಿಂಬೂರ, ಶಿಕ್ಷಣಾಧಿಕಾರಿ ಬಸಣ್ಣಗೌಡ ಆಲ್ದಾಳ, ಹಣಮಂತ, ಸುರೇಶ ಹುಗ್ಗಿ, ಎಚ್ ಹಣಮಂತ, ಸುದರ್ಶನರೆಡ್ಡಿ, ಎಚ್ ಸೋಮಾಪುರ ಸೇರಿದಂತೆ ಶಿಕ್ಷಕರು, ಪೆÇೀಷಕರು ಉಪಸ್ಥಿತರಿದ್ದರು.