ಪೆರ್ಲ ಅವರಿಗೆ ಶ್ರೀ ಚನ್ನರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ:ನ.6: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿರೇಮಠ ಸಂಸ್ಥಾನದ ಪೂಜ್ಯಶ್ರೀಗಳಾದ ಡಾ. ಚೆನ್ನವೀರ ಶಿವಾಚಾರ್ಯರ ಜನ್ಮದಿನದ ಪ್ರಯುಕ್ತ ಆಕಾಶವಾಣಿ ಕಲಬುರಗಿ ಕೇಂದ್ರದ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ,ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿಯಿಂದ ಅಭಿವೃದ್ಧಿ ಪತ್ರಿಕೋದ್ಯಮಿ ಪ್ರಶಸ್ತಿ ಪಡೆದ ಡಾ. ಸದಾನಂದ ಪೆರ್ಲ ಅವರಿಗೆ ನ.4ರಂದು ಸುಕ್ಷೇತ್ರ ಹಾರಕೂಡದಲ್ಲಿ ನಡೆದ ಸಮಾರಂಭದಲ್ಲಿ ಕ್ಷೇತ್ರದ ಪೀಠಾಧಿಪತಿ ಗಳಾದ ಡಾ.ಚೆನ್ನವೀರ ಶಿವಾಚಾರ್ಯರು “ಶ್ರೀ ಚನ್ನರತ್ನ” ಪ್ರಶಸ್ತಿ ಪ್ರದಾನ ಮಾಡಿದರು.
ಕಾಸರಗೋಡಿನ ಪೆರ್ಲದವರಾದ ಇವರಿಗೆ ಕಲಬುರಗಿ ಮಂಗಳೂರು ಆಕಾಶವಾಣಿಯಲ್ಲಿ,ಪತ್ರಿಕೆಯಲ್ಲಿನ ಮಾಧ್ಯಮ ಸೇವೆ ಮತ್ತು ಸಾಹಿತ್ಯ, ಸಮಾಜಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ನಾಡೋಜ ಡಾ. ಕಯ್ಶಾರ ಕಿಞ್ಞಣ್ಣರೈ ಅವರ ಕುರಿತಾಗಿ ಮಹಾ ಪ್ರಬಂಧ ಮಂಡಿಸಿ ಪಿಹೆಚ್ ಡಿ ಪದವಿಯನ್ನು ಪಡೆದಿದ್ದಾರೆ.ಸಾಹಿತ್ಯಿಕವಾಗಿ ಮಹತ್ವದ ಕೃತಿಗಳನ್ನು ಹೊರ ತಂದಿದ್ದಾರೆ. ಕಲಬುರಗಿ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಒಂದಿಷ್ಟು ಮಾತು,ಹರ್ಷದ ಅತಿಥಿ,ಅನನ್ಯ ಮಹಾದೇವ, ಶರಣ ಹೆಂಡದ ಮಾರಯ್ಯ ಕಾಸರಗೋಡಿನ ಕನ್ನಡ ಹೋರಾಟ ಕೃತಿಗಳು ಪ್ರಮುಖವಾದವುಗಳು. ಕಲಬುರಗಿ ಯಲ್ಲಿ ನಡೆದ 86ನೆಯ ಅ. ಭಾ.ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಾನುಲಿಯಲ್ಲಿ 32 ಗಂಟೆ ನೇರ ಪ್ರಸಾರ ಮಾಡಿ ದಾಖಲೆ ಮಾಡಿದ್ದಾರೆ. ಸೃಜನಶೀಲ ಕಾರ್ಯಕ್ರಮಗಳ ಮೂಲಕ ಶ್ರಾವ್ಯ ಮಾಧ್ಯಮದಲ್ಲಿ ವಿನೂತನ ಛಾಪು ಮೂಡಿಸಿ ಜನಪ್ರಿಯರಾಗಿದ್ದಾರೆ.ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಬಾನುಲಿ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಇವರು ಇತ್ತೀಚೆಗೆ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಒಂದು ವರ್ಷ ಅವಧಿಯಲ್ಲಿ ನೇರ ಪ್ರಸಾರದಲ್ಲಿ “ಅಮೃತ ಹೆಜ್ಜೆಗಳು ” ಶೀರ್ಷಿಕೆಯಡಿ 22 ಉಪನ್ಯಾಸ ಪ್ರಸಾರ ಮಾಡಿ ಕೇಳುಗರ ಮೆಚ್ಚುಗೆ ಪಡೆದಿದ್ದಾರೆ .