
ನವದೆಹಲಿ, ಮಾ.೩೦: ಜಗತ್ತಿನ ವಿವಿಧ ದೇಶಗಳಿಗೆ ಕೊರೊನಾ ಸೋಂಕು ಲಸಿಕೆಯ ಪೂರೈಕೆ ಮಾಡಿರುವ ಭಾರತ ಇದೀಗ ಪೆರುಗ್ವೆಗೆ ೧ ಲಕ್ಷ ಡೋಸ್ ಲಸಿಕೆಯನ್ನು ಪೂರೈಕೆ ಮಾಡಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯನ್ನು ಇಂದು ಪೆರುಗ್ವೆಗೆ ಕಳುಹಿಸಲಾಯಿತು.
ಭಾರತದಿಂದ ೧೦೦೦೦೦ ಡೋಸ್ ಲಸಿಕೆಯನ್ನು ಪೂರೈಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಕ್ಕೆ ಪೆರುಗ್ವೆ ಸರಕಾರ ಧನ್ಯವಾದ ಅರ್ಪಿಸಿದೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯನ್ನು ದಕ್ಷಿಣ ಅಮೇರಿಕನ್ ದೇಶಕ್ಕೆ ಪೂರೈಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೆರಗ್ವೆ ಜೊತೆ ಭಾರತ ತಮ್ಮ ಸ್ನೇಹ ಸಂಬಂಧವನ್ನು ಹೊಂದಿದೆ ಹೀಗಾಗಿ ಲಸಿಕೆಯನ್ನು ಅಲ್ಲಿಗೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೆರುಗ್ವೆಯಲ್ಲಿ ೨ ಲಕ್ಷ ೧೦ ಸಾವಿರ ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ೪,೦೬೩ ಮಂದಿ ಮೃತಪಟ್ಟಿದ್ದಾರೆ.
೭೫ ದೇಶಗಳಿಗೆ ಲಸಿಕೆ:
ಭಾರತದಿಂದ ಇದುವರೆಗೂ ೭೫ ದೇಶಗಳಿಗೂ ಹೆಚ್ಚು ರಾಷ್ಟ್ರಗಳಿಗೆ ಕೊರೋನಾ ಸೋಂಕು ಲಸಿಕೆ ಪೂರೈಕೆ ಮಾಡಲಾಗಿದೆ.
ಈವರೆಗೆ ೬೩೮.೮೧ ಲಕ್ಷ ಡೋಸ್ ವಿವಿಧ ದೇಶಗಳಿಗೆ ಪೂರೈಕೆ ಮಾಡಲಾಗಿದೆ ಎಂದು ಸಚಿವ ಜೈ ಶಂಕರ್ ತಿಳಿಸಿದ್ದಾರೆ