ಪೆಮ್ಮಶೆಟ್ಟಹಳ್ಳಿ ಸುರೇಶ್ ಸಹಕಾರಿ ಯೂನಿಯನ್ ಅಧ್ಯಕ್ಷ

ಕೋಲಾರ,ಜೂ,೧- ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷರಾಗಿ ಪೆಮ್ಮಶೆಟ್ಟನಹಳ್ಳಿಯ ಎಸ್.ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಬುಧವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸುರೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಉರಿಗಿಲಿ ರುದ್ರಸ್ವಾಮಿ ಇವರ ಹೆಸರನ್ನು ಸೂಚಿಸಿದ್ದರು. ರಘುಪತಿರೆಡ್ಡಿ ಅನುಮೋದಿಸಿದ್ದರು. ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಅಧಿಕೃತವಾಗಿ ಘೋಷಿಸಿದರು.
ಹಿಂದಿನ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣಕ್ಕೆ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಒಟ್ಟು ೧೭ ಮಂದಿ ಸದಸ್ಯರ ಪೈಕಿ ೧೫ ಮಂದಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣಾಧಿಕಾರಿಯಿಂದ ಅಧಿಕಾರ ಸ್ಪೀಕರಿಸಿದ ನಂತರ ನೂತನ ಅಧ್ಯಕ್ಷ ಎಸ್.ಸುರೇಶ್ ಮಾತನಾಡಿ, ಸಹಕಾರ ಯೂನಿಯನ್ ಮೂಲಕ ಜಿಲ್ಲೆಯಲ್ಲಿ ಸಹಕಾರ ತರಬೇತಿ ಕಾರ್ಯಕ್ರಮಗಳನ್ನು ಗುಣಾತ್ಮಕವಾಗಿ ಹೆಚ್ಚಿಸುವುದಾಗಿ ಘೋಷಿಸಿದರು.
ಸಹಕಾರ ಯೂನಿಯನ್ ಕಟ್ಟಡ ದುರಸ್ಥಿ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಹಿರಿಯ ಸದಸ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಇನ್ನಿತರೇ ಎಲ್ಲಾ ಸದಸ್ಯರ ಸಹಕಾರದೊಂದಿಗೆ ನಿರ್ವಹಿಸುವುದಾಗಿ ವಿವರಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ನೂತನ ಅಧ್ಯಕ್ಷ ಸುರೇಶ್‌ರನ್ನು ಅಭಿನಂದಿಸಿ ಮಾತನಾಡಿ, ಸಹಕಾರ ಯೂನಿಯನ್‌ಗೆ ಯುವ ಮುಖಂಡ ಪೆಮ್ಮಶೆಟ್ಟಹಳ್ಳಿ ಸುರೇಶ್‌ರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸಿಕ್ಕಿದೆ, ತಮ್ಮ ಕಾಲಾವಧಿಯಲ್ಲಿ ಸಮಯ ವ್ಯರ್ಥ ಮಾಡದೆ ಯೂನಿಯನ್‌ನ ಎಲ್ಲಾ ಸಹಕಾರಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವುದರ ಜೊತೆಗೆ, ಸಹಕಾರ ರಂಗವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಶ್ರಮಿಸಬೇಕು,ಇದಕ್ಕಾಗಿ ಎಲ್ಲಾ ರೀತಿಯ ನೆರವು ನೀಡುವುದಾಗಿ ಪ್ರಕಟಿಸಿದರು.
ಸಭೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ಗಮಿತ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್, ಕಾಡುದೇವಂಡಹಳ್ಳಿ ಡಿ.ಆರ್.ರಾಮಚಂದ್ರೇಗೌಡ, ಚಿಕ್ಕತಿರುಪತಿ ಎನ್.ಶಂಕರನಾರಾಯಣಗೌಡ, ಉರಿಗಿಲಿ ಎಸ್.ಆರ್.ರುದ್ರಸ್ವಾಮಿ, ನಲ್ಲೂರು ವಿ.ರಘುಪತಿರೆಡ್ಡಿ, ಅಣ್ಣಿಹಳ್ಳಿ ಎನ್.ನಾಗರಾಜ್, ಸೊಣ್ಣಹಳ್ಳಿ ಎಸ್.ವಿ.ಗೋವರ್ಧನರೆಡ್ಡಿ, ಚಂಜಿಮಲೆ ಬಿ.ರಮೇಶ್, ಪಾಕರಹಳ್ಳಿ ಪಿ.ಎಂ.ವೆಂಕಟೇಶ್, ಕಳ್ಳಿಕುಪ್ಪ ಕೆ.ಎಂ.ಮಂಜುನಾಥ್, ತಿಮ್ಮಸಂದ್ರ ವಿ.ಪಾಪಣ್ಣ, ಕೋಲಾರದ ಆರ್.ಅರುಣ, ಪಿ.ಎನ್.ಕೃಷ್ಣಾರೆಡ್ಡಿ, ಕುರುಗಲ್ ಕೆ.ಎಂ.ವೆಂಕಟೇಶಪ್ಪ, ಕ್ಯಾಲನೂರು ಷೇಕ್ ಮಹಮದ್ ಭಾಗವಹಿಸಿದ್ದರು.
ನೂತನ ಅಧ್ಯಕ್ಷರನ್ನು ಗೋಕುಲ ಮಿತ್ರ ಬಳಗದ ಮುನಿವೆಂಕಟ್ ಯಾದವ್, ರಾಮಕೃಷ್ಣ, ಕೃಷ್ಣಮೂರ್ತಿ, ಚಂದ್ರು ಇತರರು ಸನ್ಮಾನಿಸಿದರು.