ಪೆನ್ ಡ್ರೈವ್ ಪ್ರಕರಣ ಬಯಲಿಗೆ ನಾಲ್ವರ ಮಂಪರು ಪರೀಕ್ಷೆ ನಡೆಸಿ: ಲಕ್ಷ್ಮಣ್

ಸಂಜೆವಾಣಿ ನ್ಯೂಸ್
ಮೈಸೂರು: ಮೇ.09:- ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಶಾಸಕ ಪ್ರೀತಂಗೌಡ, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ಮಾದ್ಯಮ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಬಿಟ್ಟು ಪೆನ್‍ಡ್ರೈವ್ ಹಂಚಿದವರ ಬಗ್ಗೆ ಕೂಗಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮರ್ಡರ್ ಮಾಡಿದವನನ್ನು ಬಿಟ್ಟು ಕತ್ತಿ ತಯಾರಿಸಿದವನ ಮೇಲೆ ಶಿಕ್ಷೆ ವಿಧಿಸುವಂತೆ ಆಗ್ರಹಿಸುವಂತಿದೆ ಎಂದರು.
ಸಿಡಿ ರೂವಾರಿ, ನಾಯಕ, ನಿರ್ದೇಶಕ ಪ್ರಜ್ವಲ್ ರೇವಣ್ಣ. ವಿತರಕ ಕಾರ್ತಿಕ್ ಗೌಡ. ಊರವರಿಗೆ ಹಂಚಿದ್ದು ದೇವರಾಜೇಗೌಡ. ಆದರೆ, ಸಿಎಂ ಮತ್ತು ಡಿಸಿಎಂ ಮೇಲೆ ಯಾಕೇ ಆರೋಪ ಮಾಡುತ್ತಿದ್ದಾರೆ. ತಮ್ಮ ಕೊಳಕನ್ನು ಇತರರ ಮೇಲೆ ಮೆತ್ತುವ ಪ್ರಯತ್ನ ಅತ್ಯಂತ ನಾಚಿಕೆಗೇಡು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿಶೇಷ ತನಿಖಾ ತಂಡದ ಮೇಲೆ ನಂಬಿಕೆ ಇಲ್ಲದಿದ್ದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಲಿ. ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಸಿಬಿಐಗೆ ವಹಿಸುವಂತೆ ಮೈತ್ರಿ ಪಕ್ಷದ ಮೇಲೆ ಒತ್ತಡ ತರಲಿ ಎಂದು ನುಡಿದರು.
ಪ್ರಜ್ವಲ್ ರೇವಣ್ಣಗೆ 15 ನಿಮಿಷದಲ್ಲಿ ರಾಜತಾಂತ್ರಿಕ ಪಾಸ್ ಕೊಟ್ಟು ವೀಸಾ ಸಮೇತ ಮಧ್ಯರಾತ್ರಿ ದೇಶ ಬಿಟ್ಟು ಕಳುಹಿಸಿದ್ದು ಯಾರು? ಈ ಪ್ರಕರಣದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಡಬಲ್ ಸ್ಟ್ಯಾಂಟ್ ತೆಗೆದುಕೊಳ್ಳುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾಗೆ ಪ್ರಜ್ವಲ್ ಹುಡುಕುವುದು ಕಷ್ಟವೇ ಎಂದು ಪ್ರಶ್ನಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಹುಚ್ಚನ ರೀತಿ ಮಾತಾಡುತ್ತಿದ್ದಾರೆ. ಅವರು ಗ್ರಾಪಂ ಸದಸ್ಯನಾಗಲು ಲಾಯಕ್ಕಿಲ್ಲ. ಪೆನ್ ಡ್ರೈವ್ ಕೊಡಿಸಿದ್ದು ಯಾರು? ಎಲ್ಲಿಂದ ಖರೀದಿ ಮಾಡಿದರು. ಎಷ್ಟು ಬಿಲ್ ಕೊಟ್ಟಿದ್ದಾರೆ ಎಂಬುದನ್ನು ಒಂದರೆಡು ದಿನಗಳಲ್ಲಿ ಹೇಳುತ್ತೇವೆ ಎಂದು ಲಕ್ಷ್ಮಣ್ ತಿಳಿಸಿದರು.
ದೇಶದಲ್ಲಿ 68 ಬಿಜೆಪಿ ಶಾಸಕರ ಸೆಕ್ಸ್ ಸಿಡಿ ಪ್ರಕರಣಗಳಿವೆ. ಕರ್ನಾಟಕದಲ್ಲಿಯೇ 14 ಶಾಸಕರ ಸಿಡಿಗಳಿವೆ. ಇವರೆಲ್ಲರೂ ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ. ಈ ಬಗ್ಗೆ ಆರ್. ಅಶೋಕ್ ಅವರು ಮಾಹಿತಿ ಪಡೆದುಕೊಳ್ಳಲಿ ಎಂದು ಹೇಳಿದರು.
ಜೆಡಿಎಸ್ ನಾಯಕರು ಯಾಕೇ ಪ್ರತಿಭಟನೆ ಮಾಡುತ್ತಿದ್ದಾರೆ? ಪ್ರತಿಭಟನೆ ವೇಳೆ ತನಿಖೆ ಬೇಡವೆಂದು ಭಿತ್ತಿಪತ್ರ ಹಿಡಿದಿದ್ದಾರೆ. ಯಾರನ್ನೂ ರಕ್ಷಿಸಲು ಇವರು ಪ್ರತಿಭಟನೆ ಮಾಡುತ್ತಿದ್ದಾರೆ. 2976 ವಿಡಿಯೋ ಮಾಡಿರುವುದನ್ನು ಬೆಂಬಲಿಸುತ್ತಿದ್ದಾರೆಯೇ? ಪ್ರಜ್ವಲ್ ಬಂಧನ ಮಾಡದಂತೆ ತಡೆಯುತ್ತಿದ್ದಾರೆಯೇ? ಇದು ದುರಂತ. ಬಹಳ ನಾಚಿಕೆ ಆಗುತ್ತದೆ ಎಂದರು.
ಪ್ರಜ್ವಲ್ ರೇವಣ್ಣ ಯಾಕೇ ತನಿಖೆಗೆ ಸಹಕರಿಸುತ್ತಿಲ್ಲ. ತಮ್ಮ ಹುಡುಗನನ್ನು ಕುಮಾರಸ್ವಾಮಿ ವಿದೇಶದಿಂದ ಯಾಕೇ ಕರೆಸುತ್ತಿಲ್ಲ. ಅಮಿತ್ ಶಾ ಯಾರನ್ನೂ ಕಾಪಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ಪ್ರಕರಣವನ್ನು ರಾಜಕೀಯವಾಗಿ ಬಳಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ಬಿ.ಎಂ. ರಾಮು, ಶಿವಣ್ಣ, ಭಾಸ್ಕರ್ ಎಲ್.ಗೌಡ, ಮಹೇಶ, ರಘು, ಗಿರೀಶ್, ರಘು ಗೌಡ, ರಾಮಚಂದ್ರ, ಇದ್ದರು.